ನೂತನ ಆಕಾಶ ಮತ್ತು ನೂತನ ಭೂಮಿ
1 ತರುವಾಯ, "ನೂತನ ಆಕಾಶವನ್ನೂ ನೂತನ ಭೂಮಿಯನ್ನೂ"21:1 ಯೆಶಾಯ 65:17 ಕಂಡೆನು. ಮೊದಲಿನ ಆಕಾಶವೂ ಮೊದಲಿನ ಭೂಮಿಯೂ ಇಲ್ಲದಂತಾದವು. ಇನ್ನು ಸಮುದ್ರವು ಇರಲಿಲ್ಲ. 2 ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ನೂತನ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾದ ವಧುವಿನಂತೆ ಶೃಂಗರಿಸಲಾಗಿತ್ತು. 3 ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, "ಇಗೋ ದೇವರ ನಿವಾಸವು ಮಾನವರೊಂದಿಗೆ ಇದೆ. ದೇವರು ಅವರೊಡನೆ ವಾಸಮಾಡುವರು. ಮಾನವರು ದೇವರಿಗೆ ಪ್ರಜೆಯಾಗಿರುವರು. ದೇವರು ತಾವೇ ಅವರ ಸಂಗಡ ಇರುವರು. 4 ‘ದೇವರು ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವರು. ಇನ್ನು ಮರಣವಿರುವುದಿಲ್ಲ.’21:4 ಯೆಶಾಯ 25:8 ಇನ್ನು ದುಃಖವಾಗಲಿ, ಗೋಳಾಟವಾಗಲಿ, ನೋವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು!" ಎಂದು ಹೇಳಿತು.
5 ಆಗ ಸಿಂಹಾಸನದ ಮೇಲೆ ಕುಳಿತಿದ್ದವರು, "ಇಗೋ, ನಾನು ಎಲ್ಲವನ್ನೂ ನೂತನಗೊಳಿಸುತ್ತೇನೆ!" ಎಂದರು ಮತ್ತು ನನಗೆ, "ನೀನು ಇದನ್ನು ಬರೆ. ಏಕೆಂದರೆ ಈ ಮಾತುಗಳು ನಂಬತಕ್ಕವೂ ಸತ್ಯವಾದವೂ ಆಗಿವೆ!" ಎಂದು ಹೇಳಿದನು.