10 ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಪರಿಶುದ್ಧ ಪಟ್ಟಣವಾದ ಯೆರೂಸಲೇಮು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದು ಬರುವುದನ್ನು ನನಗೆ ತೋರಿಸಿದನು. 11 ಅದು ದೇವರ ಮಹಿಮೆಯಿಂದ ಕೂಡಿತ್ತು. ಪಟ್ಟಣದ ಪ್ರಕಾಶವು ಸೂರ್ಯಕಾಂತದಂತೆ ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು. ಅದು ಸ್ವಚ್ಛವಾದ ಸ್ಪಟಿಕದಂತೆ ಕಾಣಿಸಿತು. 12 ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ ಪುತ್ರರ ಹನ್ನೆರಡು ಕುಲಗಳ ಹೆಸರುಗಳು ಬರೆದಿದ್ದವು. 13 ಪೂರ್ವದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಪಶ್ಚಿಮ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಇದ್ದವು. 14 ಪಟ್ಟಣದ ಗೋಡೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಕುರಿಮರಿಯಾದವರ ಹನ್ನೆರಡು ಜನ ಅಪೊಸ್ತಲರ ಹೆಸರುಗಳಿದ್ದವು.
Publicidade