12 ಗಲ್ಲಿಯೋನ ಎಂಬುವನು ಅಖಾಯದ ರಾಜ್ಯಪಾಲನಾಗಿದ್ದನು. ಯೆಹೂದ್ಯರು ಒಟ್ಟುಗೂಡಿ ಪೌಲನನ್ನು ವಿರೋಧಿಸಿ, ಅವನನ್ನು ನ್ಯಾಯಸ್ಥಾನಕ್ಕೆ ಕರೆದುಕೊಂಡು ಬಂದು, 13 "ಮೋಶೆಯ ನಿಯಮಕ್ಕೆ ವಿರುದ್ಧವಾದ ರೀತಿಯಲ್ಲಿ ದೇವರನ್ನು ಆರಾಧಿಸಬೇಕೆಂದು ಈ ಮನುಷ್ಯನು ಜನರನ್ನು ಪ್ರೇರೇಪಿಸುತ್ತಿದ್ದಾನೆ," ಎಂದು ದೂರು ಹೇಳಿದರು.
14 ಪೌಲನು ಮಾತನಾಡಬೇಕೆಂದಿದ್ದಾಗ, ಗಲ್ಲಿಯೋನನು ಯೆಹೂದ್ಯರಿಗೆ, "ಯೆಹೂದ್ಯರೇ, ಅಪರಾಧ ಇಲ್ಲವೆ ದುಷ್ಕಾರ್ಯದ ಬಗ್ಗೆ ನಿಮಗೇನಾದರು ಹೇಳುವುದು ಇದ್ದರೆ, ಅದನ್ನು ಸಹನೆಯಿಂದ ಕೇಳುವುದು ನನಗೆ ಯೋಗ್ಯವಾದದ್ದು. 15 ಆದರೆ ವಾಕ್ಯ, ಹೆಸರುಗಳ ಮತ್ತು ನಿಮ್ಮ ನಿಯಮದ ವಿಷಯವಾಗಿರುವ ಪ್ರಶ್ನೆಗಳಾಗಿದ್ದರೆ, ಈ ಸಂಗತಿಯನ್ನು ನೀವೇ ಬಗೆಹರಿಸಿಕೊಳ್ಳಿ, ಅಂಥ ವಿಷಯಗಳಿಗೆ ನಾನು ನ್ಯಾಯಾಧೀಶನಾಗಿರಲಾರೆ," ಎಂದನು. 16 ಹೀಗೆ ಅವನು ಅವರನ್ನು ನ್ಯಾಯಸ್ಥಾನದಿಂದ ಹೊರಗೆ ಕಳುಹಿಸಿಬಿಟ್ಟನು. 17 ಆದರೆ ಅವರು ಸಭಾಮಂದಿರದ ಅಧಿಕಾರಿ ಸೋಸ್ಥೆನನನ್ನು ಹಿಡಿದು ನ್ಯಾಯಸ್ಥಾನದ ಎದುರಿನಲ್ಲಿಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷಿಸಲಿಲ್ಲ.