5 ಸಹೋದರರು ಕೂಡಿ ವಾಸಮಾಡುವಾಗ, ಅವರಲ್ಲಿ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಆ ಸತ್ತವನ ಹೆಂಡತಿ ಮನೆಬಿಟ್ಟು ಅನ್ಯನನ್ನು ಮದುವೆಯಾಗಬಾರದು. ಗಂಡನ ಸಹೋದರನು ಅವಳನ್ನು ಹೆಂಡತಿಯಾಗಿ ತೆಗೆದುಕೊಂಡು ಮೈದುನನ ಕರ್ತವ್ಯವನ್ನು ಪೂರೈಸಬೇಕು. 6 ಅವಳು ಹೆರುವ ಚೊಚ್ಚಲ ಮಗನನ್ನು ಸತ್ತವನ ಮಗನೆಂದೇ ಎಣಿಸಬೇಕು, ಹೀಗೆ ಮಾಡುವುದರಿಂದ ಸತ್ತವನ ಹೆಸರು ಇಸ್ರಾಯೇಲರಲ್ಲಿ ಅಳಿದುಹೋಗುವುದಿಲ್ಲ.
7 ಆದರೆ ಆ ಮನುಷ್ಯನು ತನ್ನ ಅತ್ತಿಗೆಯನ್ನು ತೆಗೆದುಕೊಳ್ಳವ ಮನಸ್ಸಿಲ್ಲದಿದ್ದರೆ, ಅತ್ತಿಗೆಯು ಚಾವಡಿಗೆ ಹೋಗಿ ಹಿರಿಯರ ಹತ್ತಿರ ಬಂದು, "ನನ್ನ ಗಂಡನ ಸಹೋದರನು ತನ್ನ ಸಹೋದರನ ಹೆಸರನ್ನು ಇಸ್ರಾಯೇಲಿನಲ್ಲಿ ಮುಂದುವರಿಸಲು ಸಿದ್ಧನಿಲ್ಲ. ಅವನು ತನ್ನ ಮೈದುನನ ಕರ್ತವ್ಯವನ್ನು ನಡೆಸಲು ಮನಸ್ಸಿಲ್ಲದವನಾಗಿದ್ದಾನೆ," ಎಂದು ಹೇಳಬೇಕು. 8 ಆಗ ಅವನ ಪಟ್ಟಣದ ಹಿರಿಯರು ಅವನನ್ನು ಕರೆದು, ಅವನ ಸಂಗಡ ಮಾತನಾಡಬೇಕು. ಅವನು ನಿಂತುಕೊಂಡು, "ಅವಳನ್ನು ಮದುವೆಯಾಗುವುದಕ್ಕೆ ನನಗೆ ಮನಸ್ಸಿಲ್ಲ," ಎಂದು ಹೇಳಿದರೆ, 9 ಅವನ ಅತ್ತಿಗೆ ಹಿರಿಯರ ಮುಂದೆ ಅವನ ಬಳಿಗೆ ಬಂದು, ಕೆರವನ್ನು ಅವನ ಪಾದದಿಂದ ಬಿಡಿಸಿ, ಅವನ ಮುಖದಲ್ಲಿ ಉಗುಳಿ ಉತ್ತರಕೊಟ್ಟು, "ತನ್ನ ಸಹೋದರನ ಮನೆಯನ್ನು ಕಟ್ಟದವನಿಗೆ ಹೀಗೆಯೇ ಮಾಡಬೇಕು," ಎಂದು ಹೇಳಲಿ. 10 ಆಮೇಲೆ ಆ ಮನುಷ್ಯನ ಮನೆಯವರಿಗೆ ಇಸ್ರಾಯೇಲಿನಲ್ಲಿ ಕೆರಬಿಚ್ಚಿಸಿಕೊಂಡವನ ಮನೆಯವರು ಎಂದು ಹೆಸರಾಗುವುದು.