Pular para o conteúdo
Publicidade

ಧರ್ಮೋಪದೇಶಕಾಂಡ 26

ಪ್ರಥಮ ಫಲಗಳು ಹಾಗೂ ದಶಮಾಂಶ

1 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವತ್ತಾಗಿ ಕೊಡುವ ದೇಶಕ್ಕೆ ನೀವು ಬಂದು ಅದನ್ನು ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸಮಾಡುವಿರಿ. 2 ಆಗ ನಿಮ್ಮ ದೇಶದಿಂದ ನೀವು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಬುಟ್ಟಿಯಲ್ಲಿಟ್ಟು, ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವದಕ್ಕೆ ಆಯ್ದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. 3 ಅಲ್ಲಿ ಆ ಕಾಲದಲ್ಲಿರುವ ಯಾಜಕನ ಬಳಿಗೆ ಹೋಗಿ ಅವನಿಗೆ, "ಯೆಹೋವ ದೇವರು ನಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ನಾನು ಸೇರಿದ್ದಾಯಿತೆಂದು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಈಗ ನಾನು ಒಪ್ಪಿಕೊಳ್ಳುತ್ತೇನೆ," ಎಂದು ಹೇಳಬೇಕು. 4 ಆಗ ಯಾಜಕನು ಆ ಬುಟ್ಟಿಯನ್ನು ನಿಮ್ಮ ಕೈಯಿಂದ ತೆಗೆದು, ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠದ ಮುಂದೆ ಇಡಬೇಕು. 5 ಆಮೇಲೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮುಂದೆ, "ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ ಅಲೆದಾಡುತ್ತಾ ಸ್ವಲ್ಪ ಜನರೊಡನೆ ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಬಲಿಷ್ಠವಾದ ಮಹಾಜನಾಂಗವಾದರು. 6 ಆದರೆ ಈಜಿಪ್ಟಿನವರು ನಮ್ಮನ್ನು ಕ್ರೂರವಾಗಿ ನಡೆಸಿ, ನಮ್ಮ ಮೇಲೆ ದಬ್ಬಾಳಿಕೆ ಮಾಡಿ ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು. 7 ಆಗ ನಾವು ನಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ಮೊರೆಯಿಟ್ಟೆವು. ಯೆಹೋವ ದೇವರು ನಮ್ಮ ಸ್ವರವನ್ನು ಕೇಳಿ, ನಮ್ಮ ಸಂಕಟವನ್ನೂ ಕಷ್ಟವನ್ನೂ ದಬ್ಬಾಳಿಕೆಯನ್ನೂ ನೋಡಿದರು. 8 ಯೆಹೋವ ದೇವರು ನಮ್ಮನ್ನು ತಮ್ಮ ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಮಹಾಭಯದಿಂದಲೂ, ಸೂಚಕಕಾರ್ಯಗಳಿಂದಲೂ, ಅದ್ಭುತಗಳಿಂದಲೂ, ಈಜಿಪ್ಟಿನಿಂದ ಹೊರಗೆ ಬರಮಾಡಿ, 9 ನಮ್ಮನ್ನು ಈ ಸ್ಥಳಕ್ಕೆ ಕರೆತಂದು, ಹಾಲೂ ಜೇನೂ ಹರಿಯುವ ದೇಶವಾಗಿರುವ ಈ ದೇಶವನ್ನು ನಮಗೆ ಕೊಟ್ಟಿದ್ದಾರೆ. 10 ಹೀಗಿರುವುದರಿಂದ ಯೆಹೋವ ದೇವರೇ, ನೀವು ನಮಗೆ ಕೊಟ್ಟ ಭೂಮಿಯ ಪ್ರಥಮ ಫಲವನ್ನು ತಂದಿದ್ದೇವೆ," ಎಂದು ಹೇಳಬೇಕು. ಆಗ ಅದನ್ನು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿಟ್ಟು, ಅವರನ್ನು ಆರಾಧಿಸಬೇಕು. 11 ನಿಮ್ಮ ದೇವರಾದ ಯೆಹೋವ ದೇವರು ನಿಮಗೂ ನಿಮ್ಮ ಮನೆಗೂ ಲೇವಿಯರಿಗೂ ನಿಮ್ಮ ಸಂಗಡ ಇರುವ ಪರವಾಸಿಗಳಿಗೂ ನೀಡಿರುವ ಸೌಲಭ್ಯಕ್ಕಾಗಿ ಸಂತೋಷ ಪಡಬೇಕು.

12 ಹತ್ತನೆಯ ಪಾಲನ್ನು ಕೊಡುವ ವರ್ಷವಾಗಿರುವ ಮೂರನೆಯ ವರ್ಷದಲ್ಲಿ ನೀವು ನಿಮ್ಮ ಎಲ್ಲಾ ಹುಟ್ಟುವಳಿಯ ಹತ್ತನೆಯ ಪಾಲನ್ನು ಪ್ರತ್ಯೇಕಿಸಿದಾಗ, ನಿಮ್ಮ ಊರುಗಳಲ್ಲಿರುವ ಲೇವಿಯರೂ ಪರದೇಶಿಗಳೂ ದಿಕ್ಕಿಲ್ಲದವರೂ ವಿಧವೆಯರೂ ಉಂಡು ತೃಪ್ತರಾಗುವಂತೆ ಅದನ್ನು ಅವರಿಗೆ ಕೊಡಬೇಕು. 13 ಆಗ ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ, "ನಾವು ಮೀಸಲಿಟ್ಟ ಪರಿಶುದ್ಧ ವಸ್ತುಗಳನ್ನು ಮನೆಯಿಂದ ತೆಗೆದುಕೊಂಡು ಬಂದು, ನೀವು ಆಜ್ಞಾಪಿಸಿದ ಮೇರೆಗೆ ಅವುಗಳನ್ನು ಲೇವಿಯರಿಗೆ, ಪರದೇಶಿಗೆ, ತಂದೆತಾಯಿ ಇಲ್ಲದವರಿಗೆ, ವಿಧವೆಯರಿಗೆ ಕೊಟ್ಟಿದ್ದೇವೆ. ನಿಮ್ಮ ಆಜ್ಞೆಗಳಲ್ಲಿ ಒಂದನ್ನೂ ಮೀರಲಿಲ್ಲ, ಮರೆಯಲೂ ಇಲ್ಲ. 14 ದುಃಖದ ಸಮಯದಲ್ಲಿ ಪರಿಶುದ್ಧವಾದದ್ದರಲ್ಲಿ ಏನೂ ತಿನ್ನಲಿಲ್ಲ. ಅಶುದ್ಧರಾಗಿ ಅದರಿಂದ ತೆಗೆದುಕೊಂಡು ಉಪಯೋಗಿಸಲಿಲ್ಲ. ಸತ್ತವರಿಗಾಗಿ ಅದರಲ್ಲಿ ಏನೂ ಕೊಡಲಿಲ್ಲ. ನಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳಿದ್ದೇವೆ. ನಮಗೆ ಆಜ್ಞಾಪಿಸಿದ್ದೆಲ್ಲಾ ಮಾಡಿದ್ದೇವೆ. 15 ಪರಲೋಕದ ನಿಮ್ಮ ಪರಿಶುದ್ಧ ನಿವಾಸದೊಳಗಿಂದ ಕೆಳಗಿರುವ ನಮ್ಮನ್ನು ಕಟಾಕ್ಷಿಸಿ, ನಿಮ್ಮ ಜನರಾದ ಇಸ್ರಾಯೇಲರನ್ನೂ, ನೀವು ನಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಪ್ರಕಾರ, ನಮಗೆ ಕೊಟ್ಟಂಥ ಹಾಲೂ ಜೇನೂ ಹರಿಯುವ ಈ ದೇಶವನ್ನೂ ಆಶೀರ್ವದಿಸಿರಿ," ಎಂದು ಹೇಳಬೇಕು.

ದೇವರ ಆಜ್ಞೆಗಳನ್ನು ಕೈಗೊಳ್ಳಿರಿ

16 ಈ ತೀರ್ಪುಗಳನ್ನೂ ನಿಯಮಗಳನ್ನೂ ನೀವು ಅನುಸರಿಸಬೇಕೆಂದು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದ್ದರಿಂದ ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು. 17 ನೀವು ಈ ಹೊತ್ತು, ಯೆಹೋವ ದೇವರೇ ನಮಗೆ ದೇವರು ಎಂದೂ, ಅವರ ಮಾರ್ಗಗಳಲ್ಲಿ ನಡೆದು, ಅವರು ಹೇಳಿದ ಆಜ್ಞಾವಿಧಿನಿಯಮಗಳನ್ನು ಪಾಲಿಸಿ, ಅವರ ಮಾತಿಗೆ ವಿಧೇಯರಾಗಿರುತ್ತೇವೆ ಎಂದೂ ದೃಢವಾಗಿ ಹೇಳಿದ್ದೀರಿ. 18 ಈ ಹೊತ್ತು ನಿಮಗೆ ಯೆಹೋವ ದೇವರು ಘೋಷಿಸಿದಂತೆ, ನೀವು ಅವರ ಜನರೂ ಅವರ ಸಂಗ್ರಹಿಸಿದ ಆಸ್ತಿಯೂ ಆಗಿದ್ದೀರೆಂದು ವಾಗ್ದಾನಮಾಡಿದ್ದಾರೆ. ನೀವು ಅವರ ಎಲ್ಲಾ ಆಜ್ಞೆಗಳನ್ನು ಪಾಲಿಸಿರಿ. 19 ದೇವರು ನಿರ್ಮಿಸಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ನಿಮ್ಮನ್ನು ಕೀರ್ತಿಯಲ್ಲಿಯೂ, ಪ್ರಸಿದ್ಧತೆಯಲ್ಲಿಯೂ, ಘನತೆಯಲ್ಲಿಯೂ, ಸ್ಥಾಪಿಸುವುದಾಗಿ ನಿಮ್ಮ ದೇವರಾದ ಯೆಹೋವ ದೇವರು ವಾಗ್ದಾನ ಮಾಡಿದಂತೆ ನೀವು ಅವರಿಗೆ ಪರಿಶುದ್ಧ ಜನರಾಗಬೇಕೆಂದೂ ಘೋಷಿಸಿದ್ದಾರೆ.

Estes versículos te tocaram? Ore agora!

+581 estão orando agora.

Junte-se à corrente de oração.