Pular para o conteúdo
Publicidade

ಯೆಶಾಯ 18

ಕೂಷಿಗೆ ವಿರೋಧವಾದ ಪ್ರವಾದನೆಗಳು

1 ಕೂಷ್ ನದಿಯ ಆಚೆಯಲ್ಲಿರುವ ಸೀಮೆ,

ರೆಕ್ಕೆಗಳನ್ನು18:1 ರೆಕ್ಕೆಗಳನ್ನು ಅಥವಾ ಮಿಡತೆಯ ರೆಕ್ಕೆ ಪಟಪಟನೆ ಬಡಿಯುವ ನಾಡಿಗೆ ಕಷ್ಟ!

2 ಇದು ಆಪಿನ ದೋಣಿಗಳಲ್ಲಿ ಸಮುದ್ರ ಮಾರ್ಗದಿಂದ

ರಾಯಭಾರಿಗಳನ್ನು ನೀರಿನ ಮೇಲೆ ಕಳುಹಿಸುತ್ತದೆ.

ಶೀಘ್ರವಾಗಿ ಬರುತ್ತಿರುವ ದೂತರೇ,

ಎತ್ತರವಾದವರೂ, ನುಣುಪಾದ ಚರ್ಮವುಳ್ಳ ಜನರ ಬಳಿಗೂ,

ಸರ್ವರಿಗೂ ಭಯಪ್ರಧರಾಗಿರುವ ಜನರ ಬಳಿಗೂ,

ವಿಚಿತ್ರ ಭಾಷೆಯಿರುವ ಹಾಗೂ ನದಿಗಳಿಂದ ವಿಂಗಡವಾಗಿರುವ

ಆಕ್ರಮಣಕಾರಿ ರಾಷ್ಟ್ರದವರ ಬಳಿಗೂ ಹೋಗಿರಿ.

3 ಜಗದ ಸಕಲ ನಿವಾಸಿಗಳೇ!

ಭೂಮಿಯಲ್ಲಿ ವಾಸಿಸುವವರೇ!

ಬೆಟ್ಟಗಳ ಮೇಲೆ ಧ್ವಜವನ್ನು ಎತ್ತುವಾಗ

ಅದನ್ನು ನೀವು ನೋಡುವಿರಿ,

ತುತೂರಿಯನ್ನು ಊದುವಾಗ ಕೇಳಿಸಿಕೊಳ್ಳುವಿರಿ.

4 ಯೆಹೋವ ದೇವರು ನನಗೆ ಹೀಗೆ ಹೇಳಿದರು,

"ನಾನು ನನ್ನ ವಿಶ್ರಾಂತಿಯನ್ನು ತೆಗೆದುಕೊಳ್ಳುವೆನು.

ಬಿಸಿಹಗಲಿನ ಸೂರ್ಯನಂತೆಯೂ

ಸುಗ್ಗಿಯಲ್ಲಿನ ಮಂಜಿನ ಮೋಡದಂತೆಯೂ

ನಾನು ನನ್ನ ನಿವಾಸಸ್ಥಾನದಲ್ಲಿ ಸುಮ್ಮನೆ ನೋಡುತ್ತಿರುವೆನು."

5 ಏಕೆಂದರೆ ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ

ಹೂವಿನಲ್ಲಿ ದ್ರಾಕ್ಷಿ ಕಾಯಿಯಾಗುವಾಗ ಅವರು

ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ,

ಚಿಗುರುಗಳನ್ನು ಕಡಿದುಹಾಕುವರು.

6 ಅವುಗಳೆಲ್ಲ ಬೆಟ್ಟದ ಹದ್ದುಗಳಿಗೂ,

ಭೂಮಿಯ ಮೃಗಗಳಿಗೂ ಆಹಾರವಾಗುವುವು.

ಅದು ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿಯೂ,

ಕಾಡುಮೃಗಗಳಿಗೆ ಚಳಿಗಾಲದಲ್ಲಿಯೂ ಆಹಾರವಾಗುವುದು.

7 ಆಗ ಎತ್ತರವಾದ ಹಾಗೂ ನುಣುಪು ಚರ್ಮವುಳ್ಳ ಜನರಿಂದಲೂ,

ಸರ್ವರಿಗೂ ಭಯಪ್ರಧರಾದ ಜನರಿಂದಲೂ,

ವಿಚಿತ್ರ ಭಾಷೆಯಿಂದ ಹಾಗೂ ನದಿಗಳಿಂದ

ವಿಂಗಡವಾಗಿರುವ ಆಕ್ರಮಣಕಾರಿ ಜನರಿಂದಲೂ

ಸರ್ವಶಕ್ತರಾದ ಯೆಹೋವ ದೇವರಿಗೆ ಕಾಣಿಕೆಗಳು ತರಲಾಗುವುದು.

ಹೌದು, ಸೇನಾಧೀಶ್ವರ ಯೆಹೋವ ದೇವರ ಹೆಸರುಳ್ಳ ಚೀಯೋನ್ ಪರ್ವತಕ್ಕೆ ಕಾಣಿಕೆಗಳು ತರಲಾಗುವುದು.

Estes versículos te tocaram? Ore agora!

+581 estão orando agora.

Junte-se à corrente de oração.