1 "ಯೆಹೋವ ದೇವರು ತಾವೇ ಅಭಿಷೇಕಿಸಿದ ಕೋರೆಷನಿಗೆ ಹೇಳುವುದೇನೆಂದರೆ:
ರಾಷ್ಟ್ರಗಳನ್ನು ನೀನು ತುಳಿದು,
ರಾಜರ ನಡುಕಟ್ಟನ್ನು ಬಿಚ್ಚಿ,
ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆಯಲು
ನಾನು ನಿನ್ನ ಬಲಗೈಯನ್ನು ಹಿಡಿದು ನಡೆಸುವೆನು.
2 ನಾನು ನಿನ್ನ ಮುಂದೆ ಹೋಗಿ
ಬೆಟ್ಟಗುಡ್ಡಗಳನ್ನು ಸಮಮಾಡಿ,
ಕಂಚಿನ ಕದಗಳನ್ನು ಒಡೆದು,
ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು.
3 ನಿನ್ನನ್ನು ಹೆಸರು ಹಿಡಿದು ಕರೆಯುವ ಯೆಹೋವ ದೇವರು ನಾನೇ!
ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ
ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ,
ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪಗಳನ್ನೂ ನಿನಗೆ ಕೊಡುವೆನು.