ದ್ರಾಕ್ಷಿತೋಟದ ಹಾಡು
1 ನನ್ನ ಪ್ರಿಯನ ದ್ರಾಕ್ಷಿತೋಟದ
ವಿಷಯವಾದ ಹಾಡನ್ನು
ನನ್ನ ಪ್ರಾಣ ಪ್ರಿಯನಿಗೆ ನಾನು ಹಾಡುವೆನು.
ಫಲವತ್ತಾದ ಗುಡ್ಡದ ಬಳಿಯಲ್ಲಿ ನನ್ನ ಅತಿ ಪ್ರಿಯನಿಗೆ ದ್ರಾಕ್ಷಿ ತೋಟವಿದೆ.
2 ಅವನು ಅದಕ್ಕೆ ಬೇಲಿಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದುಹಾಕಿ,
ಒಳ್ಳೆಯ ದ್ರಾಕ್ಷಿ ಸಸಿಯನ್ನು ನೆಟ್ಟು,
ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ,
ದ್ರಾಕ್ಷಿ ತೊಟ್ಟಿಯನ್ನು ಕೊರೆಯಿಸಿ,
ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು,
ಅದು ಹುಳಿ ಹಣ್ಣನ್ನು ಬಿಟ್ಟಿತು.
3 "ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ,
ನನಗೂ ನನ್ನ ದ್ರಾಕ್ಷಿ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
4 ನನ್ನ ದ್ರಾಕ್ಷಿತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ
ಅದಕ್ಕೆ ಏನು ಮಾಡಬೇಕಾಗಿತ್ತು?
ಅದು ಒಳ್ಳೆಯ ದ್ರಾಕ್ಷಿ ಫಲವನ್ನು ಫಲಿಸುವುದೆಂದು ನಾನು ನಿರೀಕ್ಷಿಸುತ್ತಿರಲು,
ಅದು ಹುಳಿ ಹಣ್ಣನ್ನು ಕೊಟ್ಟಿದ್ದು ಏಕೆ?
5 ನನ್ನ ದ್ರಾಕ್ಷಿ ತೋಟಕ್ಕೆ
ನಾನು ಮಾಡುವುದು ಏನೆಂದು ನಾನು ನಿಮಗೆ ತಿಳಿಸುತ್ತೇನೆ.
ನಾನು ಅದರ ಬೇಲಿಯನ್ನು ತೆಗೆದುಹಾಕುವೆನು.
ಆಗ ದನಕರುಗಳು ಅದನ್ನು ಮೇಯ್ದುಬಿಡುವುದು.
ಅದರ ಗೋಡೆಯನ್ನು ಕೆಡವಿಬಿಡುವೆನು,
ಆಗ ಅದು ತುಳಿದಾಟಕ್ಕೆ ಈಡಾಗುವುದು.
6 ಅದನ್ನು ನಾನು ಹಾಳಾಗಲು ಬಿಡುವೆನು.
ಅದರ ಕುಡಿ ಯಾರೂ ಕತ್ತರಿಸುವುದಿಲ್ಲ, ಅಗೆಯುವುದೂ ಇಲ್ಲ,
ಅದರಲ್ಲಿ ಮುಳ್ಳು ಕಳೆ ಬೆಳೆಯುವುದು.
ಅದರ ಮೇಲೆ ಮಳೆ ಸುರಿಸಬಾರದೆಂದು
ಮೋಡಗಳಿಗೆ ಆಜ್ಞಾಪಿಸುವೆನು."
7 ಸೇನಾಧೀಶ್ವರ ಯೆಹೋವ ದೇವರ ದ್ರಾಕ್ಷಿತೋಟವು
ಇಸ್ರಾಯೇಲಿನ ಮನೆತನವು.
ಯೆಹೂದದ ಜನವೋ
ದೇವರ ಇಷ್ಟದ ಗಿಡವು.
ಅವರು ನ್ಯಾಯವನ್ನು ನಿರೀಕ್ಷಿಸಲು, ಹಿಂಸೆಯೂ,
ನೀತಿಯನ್ನು ನಿರೀಕ್ಷಿಸಲು ಗೋಳಾಟವು ಸಿಕ್ಕಿತು.