3 ‘ನಾವು ಉಪವಾಸ ಮಾಡಿದ್ದೇವೆ,
ನೀನು ಏಕೆ ಕಟಾಕ್ಷಿಸಲಿಲ್ಲ?’
‘ನಮ್ಮ ಪ್ರಾಣವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವುದೇಕೆ?’
ಎಂದು ಅವರು ಅಂದುಕೊಳ್ಳುತ್ತಾರೆ.
"ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ಇಷ್ಟದ ಕೆಲಸವನ್ನು ನಡೆಸಿ
ಮತ್ತು ನಿಮ್ಮ ಕೆಲಸದವರನ್ನು ದುಡಿತಕ್ಕೆ ಎಳೆಯುತ್ತೀರಿ.
4 ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ:
ವ್ಯಾಜ್ಯ, ಕಲಹ, ಹೊಡೆದಾಟ.
ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ,
ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ.
5 ನಾನು ಆಯ್ದುಕೊಂಡದ್ದು ಇಂಥಾ ಉಪವಾಸವೋ?
ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು,
ಗೋಣಿತಟ್ಟನ್ನು ಉಟ್ಟುಕೊಳ್ಳುವುದು,
ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು,
ಇವು ಯೆಹೋವ ದೇವರಿಗೆ ಮೆಚ್ಚಿಗೆಯಾಗುವ
ಉಪವಾಸ ಎನ್ನುತ್ತೀರೋ?
6 "ನಾನು ಆಯ್ದುಕೊಳ್ಳುವ ಉಪವಾಸವು
ಅನ್ಯಾಯದ ಸರಪಣಿಯನ್ನು ಬಿಚ್ಚುವುದೂ,
ಭಾರವಾದ ಹೊರೆಯನ್ನು ಬಿಚ್ಚುವುದೂ,
ದಬ್ಬಾಳಿಕೆಯಾದವರನ್ನು ಬಿಡಿಸುವುದೂ,
ನೊಗಗಳನ್ನೆಲ್ಲಾ ಮುರಿದುಹಾಕುವುದೂ, ಇವೇ ಅಲ್ಲವೋ?