ಕುಂಬಾರನ ಮನೆಯಲ್ಲಿ
1 ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ, 2 "ನೀನು ಎದ್ದು ಕುಂಬಾರನ ಮನೆಗೆ ಇಳಿದು ಹೋಗು. ಅಲ್ಲಿ ನಿನಗೆ ನನ್ನ ವಾಕ್ಯಗಳನ್ನು ಕೊಡುತ್ತೇನೆ," ಎಂದರು. 3 ಆಗ ನಾನು ಕುಂಬಾರನ ಮನೆಗೆ ಇಳಿದು ಹೋದೆನು. ಇಗೋ, ಅವನು ಚಕ್ರದ ಮೇಲೆ ಕೆಲಸ ಮಾಡುತ್ತಿದ್ದನು. 4 ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟು ಹೋಯಿತು. ಆಗ ಕುಂಬಾರನಿಗೆ ಒಳ್ಳೆಯದೆಂದು ತೋರುವ ಪ್ರಕಾರ, ಅದನ್ನು ಮತ್ತೊಂದು ಪಾತ್ರೆಯನ್ನಾಗಿ ಮಾಡಿದನು.
5 ಅನಂತರ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ, 6 "ಈ ಇಸ್ರಾಯೇಲಿನ ಮನೆತನದವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡಲಾರೆನೇ, ಎಂದು ಯೆಹೋವ ದೇವರು ಅನ್ನುತ್ತಾರೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ, ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ.