ಸಿರಿವಂತನೂ ಬಡ ಲಾಜರನೂ
19 ಅನಂತರ ಯೇಸು ಹೀಗೆ ಒಂದು ಸಾಮ್ಯ ಹೇಳಿದರು, "ಬಹು ಬೆಲೆಬಾಳುವ16:19 ಗ್ರೀಕ್ ಭಾಷೆಯಲ್ಲಿ ಸಕಲಾತಿ, ನಸುಗೆಂಪು ಹಾಗೂ ನಯವಾದ ನಾರುಮಡಿ ವಸ್ತ್ರಗಳನ್ನೂ ಧರಿಸಿಕೊಂಡು ಪ್ರತಿದಿನವೂ ಭೋಗಗಳಲ್ಲಿಯೂ ಆಡಂಭರದಲ್ಲಿಯೂ ಬಾಳುತ್ತಿದ್ದ ಒಬ್ಬ ಧನವಂತನಿದ್ದನು. 20 ಅವನ ಬಾಗಿಲಲ್ಲಿ, ಮೈತುಂಬಾ ಹುಣ್ಣುಗಳಿದ್ದ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದಿರುತ್ತಿದ್ದನು. 21 ಧನವಂತನ ಮೇಜಿನಿಂದ ಬೀಳುವ ರೊಟ್ಟಿತುಂಡುಗಳನ್ನು ತಿನ್ನುವುದಕ್ಕೆ ಆ ಲಾಜರನು ಹಂಬಲಿಸುತ್ತಿದ್ದನು. ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
22 "ಒಂದು ದಿನ ಆ ಭಿಕ್ಷುಕನು ಸತ್ತುಹೋದನು. ದೇವದೂತರು ಅವನನ್ನು ಅಬ್ರಹಾಮನ ಬಳಿಗೆ ತೆಗೆದುಕೊಂಡು ಹೋದರು. ಧನವಂತನು ಸಹ ಸತ್ತುಹೋದನು. ಅವನಿಗೆ ಶವಸಂಸ್ಕಾರವಾಯಿತು. 23 ಅವನು ಪಾತಾಳದಲ್ಲಿ, ಯಾತನೆಪಡುತ್ತಾ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಲ್ಲಿ ಅಬ್ರಹಾಮನನ್ನೂ, ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ಕಂಡನು. 24 ಆಗ ಧನವಂತನು, ‘ತಂದೆಯೇ ಅಬ್ರಹಾಮನೇ, ನನ್ನನ್ನು ಕರುಣಿಸು. ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ, ನನ್ನ ನಾಲಿಗೆಯನ್ನು ತಣ್ಣಗೆ ಮಾಡಲು ಅವನನ್ನು ಕಳುಹಿಸು, ಈ ಅಗ್ನಿಜ್ವಾಲೆಯಲ್ಲಿ ಯಾತನೆಪಡುತ್ತಿದ್ದೇನೆ,’ ಎಂದು ಕೂಗಿ ಹೇಳಿದನು.
25 "ಆದರೆ ಅಬ್ರಹಾಮನು, ‘ಮಗನೇ, ನೀನು ನಿನ್ನ ಜೀವಮಾನದಲ್ಲಿ ಒಳ್ಳೆಯವುಗಳನ್ನು ಹೊಂದಿದೆಯಲ್ಲಾ, ಲಾಜರನು ಕೆಟ್ಟವುಗಳನ್ನು ಅನುಭವಿಸಿದ್ದನ್ನು ನೆನಪಿಗೆ ತಂದುಕೋ, ಈಗ ಅವನು ಆದರಣೆ ಹೊಂದುತ್ತಿದ್ದಾನೆ. ನೀನು ಯಾತನೆಪಡುತ್ತಿದ್ದೀ. 26 ಇದಲ್ಲದೆ ಇಲ್ಲಿಂದ ನಿಮ್ಮ ಕಡೆಗೆ ದಾಟಬೇಕೆಂದಿರುವವರು ದಾಟದ ಹಾಗೆಯೂ ಅಲ್ಲಿಂದ ನಮ್ಮ ಕಡೆಗೆ ಬರಬೇಕೆಂದಿರುವವರು ಬಾರದಂತೆಯೂ ನಮಗೂ ನಿಮಗೂ ನಡುವೆ ಒಂದು ದೊಡ್ಡ ಅಂತರ ಸ್ಥಾಪಿಸಿದೆ,’ ಎಂದನು.
27 "ಆಗ ಅವನು, ‘ಅಪ್ಪಾ, ಹಾಗಾದರೆ ನೀನು ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಾನು ಬೇಡಿಕೊಳ್ಳುತ್ತೇನೆ. 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರೂ ಈ ಯಾತನೆಯ ಸ್ಥಳಕ್ಕೆ ಬಾರದ ಹಾಗೆ ಲಾಜರನು ಅವರನ್ನು ಎಚ್ಚರಿಸಲಿ,’ ಎಂದನು.
29 "ಅದಕ್ಕೆ ಅಬ್ರಹಾಮನು ಅವನಿಗೆ, ‘ಅವರಿಗೆ ಮೋಶೆಯ ಮತ್ತು ಪ್ರವಾದಿಗಳ ಗ್ರಂಥಗಳಿವೆ; ಅದರಲ್ಲಿರುವುದಕ್ಕೆ ಅವರು ಕಿವಿಗೊಡಲಿ,’ ಎಂದನು.
30 "ಆಗ ಅವನು, ‘ಹಾಗಲ್ಲ, ತಂದೆ ಅಬ್ರಹಾಮನೇ, ಸತ್ತವರೊಳಗಿಂದ ಒಬ್ಬನು ಜೀವಂತವಾಗಿ ಅವರ ಬಳಿಗೆ ಹೋದರೆ, ಅವರು ಪಶ್ಚಾತ್ತಾಪ ಪಡುವರು,’ ಎಂದನು.
31 "ಅದಕ್ಕೆ ಅಬ್ರಹಾಮನು ಅವನಿಗೆ, ‘ಮೋಶೆಯು ಮತ್ತು ಪ್ರವಾದಿಗಳು ಹೇಳಿದ್ದನ್ನೇ ಅವರು ಕೇಳದೆ ಹೋದರೆ, ಸತ್ತವರೊಳಗಿಂದ ಒಬ್ಬನು ಎದ್ದರೂ ಅವರು ಒಪ್ಪುವುದಿಲ್ಲ,’ ಎಂದು ಹೇಳಿದನು."