ಯೇಸು ಸಮುದ್ರದ ಬಿರುಗಾಳಿಯನ್ನು ನಿಲ್ಲಿಸಿದ್ದು
22 ಒಂದು ದಿನ ಯೇಸು ತಮ್ಮ ಶಿಷ್ಯರಿಗೆ, "ನಾವು ಕೆರೆಯ ಆಚೆದಡಕ್ಕೆ ಹೋಗೋಣ," ಎಂದು ಹೇಳಿದರು, ಆಗ ಅವರು ದೋಣಿಯನ್ನು ಹತ್ತಿ ಹೊರಟರು. 23 ಆದರೆ ಅವರು ಪ್ರಯಾಣ ಮಾಡುತ್ತಿದ್ದಾಗ, ಯೇಸು ನಿದ್ರಿಸುತ್ತಿದ್ದರು. ಆಗ ಬಿರುಗಾಳಿಯು ಸರೋವರದ ಮೇಲೆ ಬೀಸಲು, ದೋಣಿಯು ನೀರಿನಿಂದ ತುಂಬಿದ್ದರಿಂದ, ಅವರು ಅಪಾಯಕ್ಕೊಳಗಾದರು.
24 ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, "ಗುರುವೇ, ಗುರುವೇ, ನಾವು ಮುಳುಗುತ್ತಿದ್ದೇವೆ!" ಎಂದರು.
ಆಗ ಯೇಸು ಎದ್ದು ಬಿರುಗಾಳಿಯನ್ನೂ ರಭಸವಾಗಿ ಬರುತ್ತಿದ್ದ ಅಲೆಗಳನ್ನೂ ಗದರಿಸಿದರು; ಆಗ ಬಿರುಗಾಳಿಯು ನಿಂತು ಹೋಗಿ, ಎಲ್ಲಾ ಪ್ರಶಾಂತವಾಯಿತು. 25 ಆಗ ಯೇಸು ತಮ್ಮ ಶಿಷ್ಯರಿಗೆ, "ನಿಮ್ಮ ನಂಬಿಕೆ ಎಲ್ಲಿ?" ಎಂದರು.
ಅವರು ಹೆದರಿದವರಾಗಿ ಆಶ್ಚರ್ಯದಿಂದ ಒಬ್ಬರಿಗೊಬ್ಬರು, "ಇವರು ಯಾರಿರಬಹುದು? ಗಾಳಿಗೂ ನೀರಿಗೂ ಸಹ ಅಪ್ಪಣೆ ಕೊಡುತ್ತಾರಲ್ಲಾ. ಅವು ಇವರು ಹೇಳಿದ ಹಾಗೆ ಕೇಳುತ್ತಾವಲ್ಲಾ?" ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
ದೆವ್ವಗಳಿಂದ ಪೀಡಿತನಾದವನನ್ನು ಗುಣಮಾಡಿದ್ದು
26 ಅವರು ಗಲಿಲಾಯಕ್ಕೆ ಎದುರಾಗಿದ್ದ, ಗೆರಸೇನರ ಸೀಮೆಗೆ ತಲುಪಿದರು.