Publicidade

Salmos 32

ದಾವೀದನ ಕೀರ್ತನೆ. ಮಾಸ್ಕಿಲ ಪದ್ಯ.

1 ಯಾರ ಉಲ್ಲಂಘನೆಗಳು ಕ್ಷಮಿಸಲಾಗಿವೆಯೋ,

ಯಾರ ಪಾಪಗಳು ಮುಚ್ಚಲಾಗಿವೆಯೋ

ಅವರೇ ಧನ್ಯರು.

2 ಯೆಹೋವ ದೇವರು ಯಾರ ಅನ್ಯಾಯವನ್ನು ಎಣಿಸುವುದಿಲ್ಲವೋ,

ಯಾರ ಆತ್ಮದಲ್ಲಿ ವಂಚನೆ ಇರುವುದಿಲ್ಲವೋ

ಆ ಮನುಷ್ಯನು ಧನ್ಯನು.

3 ನಾನು ನನ್ನ ಪಾಪವನ್ನು ಅರಿಕೆ ಮಾಡದೆ ಇದ್ದಾಗ,

ದಿನವೆಲ್ಲಾ ನರಳುವುದರಿಂದ

ನನ್ನ ಎಲುಬುಗಳು ಸವೆದು ಹೋದವು.

4 ದೇವರೇ, ರಾತ್ರಿ ಹಗಲು

ನಿಮ್ಮ ಕೈ ನನ್ನ ಮೇಲೆ ಭಾರವಾಗಿತ್ತು;

ನನ್ನ ಬಲವು ಬೇಸಿಗೆಯ ಬಿಸಿಲಿನಲ್ಲಿ

ಕುಂದಿಹೋಗುವಂತೆ ಆಯಿತು.

5 ನನ್ನ ಪಾಪವನ್ನು ನಿಮಗೆ ತಿಳಿಸಿ,

ನನ್ನ ಅನ್ಯಾಯವನ್ನು ಮರೆಮಾಡದೆ,

"ನನ್ನ ಉಲ್ಲಂಘನೆಗಳನ್ನು ಯೆಹೋವ ದೇವರಿಗೆ

ಅರಿಕೆ ಮಾಡುವೆನು," ಎಂದು ಹೇಳಿದೆನು;

ಆಗ, ನೀವು

ನನ್ನ ಪಾಪದ ಅಪರಾಧವನ್ನು ಪರಿಹರಿಸಿದಿರಿ.

6 ಆದುದರಿಂದ ಭಕ್ತರೆಲ್ಲರು ನೀವು

ಸಿಕ್ಕುವ ಕಾಲದಲ್ಲಿ ನಿಮಗೆ ಪ್ರಾರ್ಥನೆ ಮಾಡಲಿ;

ನಿಶ್ಚಯವಾಗಿ ನೀರಿನ ಮಹಾಪ್ರವಾಹಗಳು

ಅವರ ಸಮೀಪಕ್ಕೆ ಬರುವುದಿಲ್ಲ.

7 ನೀವು ನನಗೆ ಮರೆಮಾಡುವ ಸ್ಥಳವಾಗಿರುವಿರಿ;

ಇಕ್ಕಟ್ಟಿನಿಂದ ನನ್ನನ್ನು ಕಾಯುತ್ತೀರಿ;

ವಿಮೋಚನಾ ಧ್ವನಿಗಳಿಂದ ನೀವು ನನ್ನನ್ನು ಸುತ್ತುವರಿಯುತ್ತೀರಿ.

8 ಯೆಹೋವ ದೇವರು ಹೇಳುವುದೇನೆಂದರೆ: ನಾನು ನಿನಗೆ ಬುದ್ಧಿ ಹೇಳಿ,

ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು;

ನನ್ನ ಮೆಚ್ಚುಗೆಯಿಂದ ನಿನ್ನನ್ನು ನಡೆಸುವೆನು.

9 ವಿವೇಕವಿಲ್ಲದ ಕುದುರೆಯ ಹಾಗೆಯೂ,

ಹೇಸರಗತ್ತೆಯ ಹಾಗೆಯೂ ಇರಬೇಡಿರಿ;

ಬಾರಿನಿಂದಲೂ, ಕಡಿವಾಣದಿಂದಲೂ ಅವುಗಳನ್ನು ನಿಯಂತ್ರಿಸಬೇಕು,

ಇಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.

10 ದುಷ್ಟರಿಗೆ ವ್ಯಥೆಗಳು ಬಹಳ;

ಆದರೆ ಯೆಹೋವ ದೇವರಲ್ಲಿ ಭರವಸವಿಡುವವನನ್ನು

ಅದರ ಒಂಡಬಡಿಕೆಯ ಪ್ರೀತಿಯು ಸುತ್ತುವರಿಯುವುದು.

11 ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ;

ಯಥಾರ್ಥ ಹೃದಯ ಉಳ್ಳವರೇ, ಜಯಗೀತೆ ಹಾಡಿರಿ.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-