Publicidade

Salmos 144

ದಾವೀದನ ಕೀರ್ತನೆ.

1 ನನ್ನ ಬಲವಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ.

ದೇವರು ನನ್ನ ಕೈಗಳಿಗೆ ಕಾಳಗವನ್ನು,

ನನ್ನ ಬೆರಳುಗಳಿಗೆ ಯುದ್ಧವಿದ್ಯೆಯನ್ನು ಕಲಿಸಿದ್ದಾರೆ.

2 ಅವರು ನನ್ನನ್ನು ಪ್ರೀತಿಸುವ ದೇವರು,

ಅವರು ನನ್ನ ಕೋಟೆಯೂ, ನನ್ನ ಬಲವಾದ ಆಶ್ರಯವೂ,

ನನ್ನನ್ನು ತಪ್ಪಿಸುವವರೂ, ನನ್ನ ಭರವಸೆಯೂ, ನನ್ನ ಗುರಾಣಿಯೂ,

ಜನಾಂಗಗಳನ್ನು ನನಗೆ ವಶಮಾಡುವವರೂ ಆಗಿದ್ದಾರೆ.

3 ಯೆಹೋವ ದೇವರೇ, ನೀವು ಮಾನವನನ್ನು ಲಕ್ಷವಿಡುವ ಹಾಗೆ ಅವನು ಎಷ್ಟರವನು?

ನೀವು ಅವನನ್ನು ನೆನಸುವ ಹಾಗೆ ಮಾನವನು ಎಷ್ಟರವನು?

4 ಮನುಷ್ಯನು ಕೇವಲ ಉಸಿರಿನಂತಿದ್ದಾನೆ;

ಅವನ ದಿವಸಗಳು ಅಳಿದು ಹೋಗುವ ನೆರಳಿನ ಹಾಗಿವೆ.

5 ಯೆಹೋವ ದೇವರೇ, ನಿಮ್ಮ ಆಕಾಶಗಳನ್ನು ಒಡೆದು ಇಳಿದು ಬನ್ನಿರಿ;

ಬೆಟ್ಟಗಳನ್ನು ಮುಟ್ಟಿರಿ, ಆಗ ಅವುಗಳಿಂದ ಹೊಗೆ ಹೊರಹೊಮ್ಮುವುದು.

6 ಮಿಂಚಿನಿಂದ ವೈರಿಗಳನ್ನು ಚದರಿಸಿರಿ.

ನಿಮ್ಮ ಬಾಣಗಳನ್ನು ಎಸೆದು, ಅವರನ್ನು ದಂಡಿಸಿರಿ.

7 ನಿಮ್ಮ ಕೈಯನ್ನು ಉನ್ನತದಿಂದ ಚಾಚಿ,

ಮಹಾ ಜಲದಿಂದಲೂ,

ಪರದೇಶದವರ ಕೈಯಿಂದಲೂ

ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ.

8 ಅವರ ಬಾಯಿ ಸುಳ್ಳನ್ನು ನುಡಿಯುತ್ತಿದೆ,

ಅವರ ಬಲಗೈ ಮೋಸದ ಬಲಗೈ ಆಗಿದೆ.

9 ಓ ದೇವರೇ, ನಾನು ಹೊಸಹಾಡನ್ನು ನಿಮಗೆ ಹಾಡುವೆನು;

ಹತ್ತು ತಂತಿಗಳ ವಾದ್ಯದಿಂದ ನಿಮ್ಮನ್ನು ಕೀರ್ತಿಸುವೆನು.

10 ಅರಸರಿಗೆ ಜಯವನ್ನು ಕೊಡುವ ದೇವರೇ,

ನಿಮ್ಮ ಸೇವಕನಾದ ದಾವೀದನನ್ನೂ ಭಯಂಕರ ಖಡ್ಗದಿಂದ ಬಿಡಿಸಿದ್ದೀರಿ.

11 ಪರದೇಶದವರ ಕೈಯಿಂದ ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ;

ಅವರ ಬಾಯಿ ವಂಚನೆಯನ್ನು ನುಡಿಯುತ್ತಿದೆ.

ಅವರ ಬಾಯಿ ಸುಳ್ಳನ್ನೇ ನುಡಿಯುತ್ತಿದೆ.

12 ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ

ಯೌವನದಲ್ಲಿ ಉತ್ತಮವಾಗಿ ಬೆಳೆದವರಾಗಿರಲಿ;

ನಮ್ಮ ಹೆಣ್ಣುಮಕ್ಕಳು ಅರಮನೆಯ ಶೃಂಗಾರಕ್ಕಾಗಿ

ಕೆತ್ತಿದ ಸುಂದರ ಸ್ತಂಭಗಳ ಹಾಗಿರಲಿ.

13 ನಮ್ಮ ಉಗ್ರಾಣಗಳು

ನಾನಾ ವಿಧವಾದ ಧಾನ್ಯಗಳನ್ನು ತುಂಬಿರಲಿ.

ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ

ನಮ್ಮ ಹೊಲಗಳಲ್ಲಿ ಹತ್ತು ಸಹಸ್ರವಾಗಿ ಹೆಚ್ಚಲಿ.

14 ನಮ್ಮ ಎತ್ತುಗಳು ಪ್ರಯಾಸ ಪಡುವುದಕ್ಕೆ ಬಲವುಳ್ಳವುಗಳಾಗಲಿ;

ವೈರಿಗಳು ಒಳಗೆ ನುಗ್ಗುವುದಾಗಲಿ,

ನಮ್ಮವರನ್ನು ಸೆರೆ ಹಿಡಿಯುವುದಾಗಲಿ ಇರುವುದಿಲ್ಲ.

ನಮ್ಮ ಬೀದಿಗಳಲ್ಲಿ ಗೋಳಾಟವು ಇಲ್ಲದಿರಲಿ.

15 ಹೀಗಿರುವ ಜನರು ಧನ್ಯರು;

ಯೆಹೋವ ದೇವರು ಯಾರಿಗೆ ದೇವರಾಗಿದ್ದಾರೋ, ಅವರು ಧನ್ಯರು.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-