Publicidade

Salmos 96

1 ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ;

ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಹಾಡಿರಿ.

2 ಯೆಹೋವ ದೇವರಿಗೆ ಹಾಡಿರಿ, ಅವರ ನಾಮವನ್ನು ಸ್ತುತಿಸಿರಿ;

ಅವರ ರಕ್ಷಣೆಯನ್ನು ದಿನಂಪ್ರತಿ ಸಾರಿ ಹೇಳಿರಿ.

3 ಜನಾಂಗಗಳಲ್ಲಿ ಅವರ ಘನತೆಯನ್ನೂ,

ಎಲ್ಲಾ ಜನಾಂಗಗಳಲ್ಲಿ ಅವರ ಅದ್ಭುತಗಳನ್ನೂ ವಿವರಿಸಿರಿ.

4 ಯೆಹೋವ ದೇವರು ಮಹೋನ್ನತರಾಗಿದ್ದಾರೆ, ಬಹು ಸ್ತುತಿಗೆ ಪಾತ್ರರೂ ಆಗಿದ್ದಾರೆ;

ಅವರು ಎಲ್ಲಾ ದೇವರುಗಳಿಗಿಂತ ಬಹುಭಯಭಕ್ತಿಗೆ ಪಾತ್ರರಾಗಿದ್ದಾರೆ.

5 ಏಕೆಂದರೆ ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ;

ಆದರೆ ಯೆಹೋವ ದೇವರು ಆಕಾಶಮಂಡಲವನ್ನು ನಿರ್ಮಿಸಿದವರು.

6 ಘನತೆಯೂ, ಪ್ರಭೆಯೂ ಅವರ ಮುಂದೆ ಇವೆ;

ಬಲವೂ, ಸೌಂದರ್ಯವೂ ಅವರ ಪರಿಶುದ್ಧ ಸ್ಥಳದಲ್ಲಿ ಇವೆ.

7 ಜನಾಂಗದ ಕುಟುಂಬಗಳೇ, ಯೆಹೋವ ದೇವರ ಮುಂದೆ ನೀವು ಮಹಿಮೆಯನ್ನೂ

ಬಲವನ್ನೂ ಅರ್ಪಿಸಿರಿ.

8 ಯೆಹೋವ ದೇವರ ಹೆಸರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ;

ಕಾಣಿಕೆಯನ್ನು ತೆಗೆದುಕೊಂಡು ಅವರ ಅಂಗಳಗಳಿಗೆ ಬನ್ನಿರಿ.

9 ಪರಿಶುದ್ಧತೆ ಎಂಬ ಭೂಷಣದೊಡನೆ ಯೆಹೋವ ದೇವರನ್ನು ಆರಾಧಿಸಿರಿ;

ಸಮಸ್ತ ಭೂನಿವಾಸಿಗಳೇ, ಅವರ ಮುಂದೆ ಭಯಪಡಿರಿ.

10 "ಯೆಹೋವ ದೇವರು ಆಳಿಕೆ ಮಾಡುತ್ತಾರೆ;

ಆದ್ದರಿಂದ ಲೋಕವು ಸ್ಥಿರವಾಗಿರುವುದು, ಕದಲುವುದಿಲ್ಲ;

ಅವರು ಜನರಿಗೆ ನೀತಿಯಲ್ಲಿ ನ್ಯಾಯತೀರಿಸುತ್ತಾರೆ," ಎಂದು ಎಲ್ಲಾ ಜನಾಂಗಗಳಲ್ಲಿ ಹೇಳಿರಿ.

11 ಆಕಾಶವು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ;

ಸಮುದ್ರವೂ, ಅದರಲ್ಲಿರುವುದೆಲ್ಲವೂ ಘೋಷಿಸಲಿ.

12 ಹೊಲಗಳೂ, ಅವುಗಳಲ್ಲಿರುವ ಸಮಸ್ತವೂ ಉತ್ಸಾಹಪಡಲಿ;

ಆಗ ಅಡವಿಯ ಮರಗಳೆಲ್ಲಾ ಯೆಹೋವ ದೇವರ ಮುಂದೆಯೇ ಉತ್ಸಾಹಧ್ವನಿ ಮಾಡಲಿ.

13 ಸಮಸ್ತ ಸೃಷ್ಟಿಯು ಯೆಹೋವ ದೇವರ ಸನ್ನಿಧಿಯಲ್ಲಿ ಹಾಡಲಿ,

ಏಕೆಂದರೆ ಅವರು ಲೋಕಕ್ಕೆ ನೀತಿಯಿಂದಲೂ;

ಜನರಿಗೆ ತಮ್ಮ ಸತ್ಯದಿಂದಲೂ

ನ್ಯಾಯತೀರಿಸಲು ಬರುತ್ತಾರೆ.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-