Publicidade

Salmos 36

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆಹೋವ ದೇವರ ಸೇವಕನಾದ ದಾವೀದನ ಕೀರ್ತನೆ.

1 ನನ್ನ ಹೃದಯದಲ್ಲಿ ದೇವರಿಂದ ಬಂದ ಸಂದೇಶವು

ದುಷ್ಟರ ಪಾಪದ ಬಗ್ಗೆ ಹೀಗಿರುತ್ತದೆ:

ಅವರ ದೃಷ್ಟಿಯಲ್ಲಿ

ದೇವರ ಭಯವೇ ಇಲ್ಲ.

2 ತಮ್ಮ ಪಾಪವನ್ನು ಹಗೆ ಮಾಡದೆ ಅಥವಾ ಪಾಪವನ್ನು ತಾವು ಕಂಡುಕೊಳ್ಳಲಾರದಷ್ಟು

ಅವರು ತಮ್ಮ ದೃಷ್ಟಿಯಲ್ಲಿ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ.

3 ಅವರ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿರುತ್ತವೆ;

ಬುದ್ಧಿಯಿಂದ ನಡೆಯುವುದನ್ನೂ ಒಳ್ಳೆಯದನ್ನು ಮಾಡುವುದನ್ನೂ ಅವರು ಬಿಟ್ಟಿದ್ದಾರೆ.

4 ಕುಯುಕ್ತಿಯನ್ನು ತಮ್ಮ ಹಾಸಿಗೆಯ ಮೇಲೆ ಕಲ್ಪಿಸುತ್ತಾರೆ;

ಪಾಪದ ಮಾರ್ಗಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ;

ಅವರು ಕೆಟ್ಟದ್ದಕ್ಕೆ ಅಸಹ್ಯಪಡುವುದಿಲ್ಲ.

5 ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ಆಕಾಶವನ್ನು ಮುಟ್ಟುತ್ತದೆ;

ನಿಮ್ಮ ನಂಬಿಗಸ್ತಿಕೆಯು ಮೇಘಗಳವರೆಗೆ ಮುಟ್ಟಿದೆ.

6 ನಿಮ್ಮ ನೀತಿಯು ದೊಡ್ಡ ಪರ್ವತಗಳ ಹಾಗಿದೆ;

ನಿಮ್ಮ ನ್ಯಾಯತೀರ್ಪುಗಳು ಮಹಾ ಅಗಾಧವೇ.

ಯೆಹೋವ ದೇವರೇ, ನೀವು ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀರಿ.

7 ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ಎಷ್ಟೋ ಅಮೂಲ್ಯವಾದದ್ದು!

ಮನುಷ್ಯರು ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಆಶ್ರಯಪಡೆಯುತ್ತಾರೆ.

8 ನಿಮ್ಮ ಆಲಯದ ಸಮೃದ್ಧಿಯಿಂದ ಅವರು ಸಂತೃಪ್ತಿ ಹೊಂದುವರು;

ನಿಮ್ಮ ಹರ್ಷ ನದಿಯಿಂದ ಅವರಿಗೆ ಕುಡಿಯಲು ಕೊಡುವಿರಿ.

9 ಏಕೆಂದರೆ ನಿಮ್ಮ ಬಳಿಯಲ್ಲಿ ಜೀವದ ಬುಗ್ಗೆ ಉಂಟು;

ನಿಮ್ಮ ಬೆಳಕಿನಲ್ಲಿ ನಾವು ಬೆಳಕನ್ನು ಕಾಣುವೆವು.

10 ನಿಮ್ಮನ್ನು ತಿಳಿದವರಿಗೆ ನಿಮ್ಮ ಪ್ರೀತಿಯು ಮುಂದುವರೆಯಲಿ

ಯಥಾರ್ಥ ಹೃದಯದವರಿಗೆ ನಿಮ್ಮ ನೀತಿಯೂ ನೆಲೆಯಾಗಲಿ.

11 ಗರ್ವಿಷ್ಠರ ಪಾದ ನನಗೆ ವಿರೋಧವಾಗಿ ಬಾರದೇ ಇರಲಿ;

ದುಷ್ಟರ ಕೈ ನನ್ನನ್ನು ತೆಗೆದು ಹಾಕದಿರಲಿ.

12 ಕೇಡು ಮಾಡುವವರು ಬಿದ್ದಿದ್ದಾರೆ.

ಅವರು ಏಳಲಾರದೆ ಕೆಳಗೆ ಬಿದ್ದಿದ್ದಾರೆ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-