Publicidade

Salmos 118

1 ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು.

ಅವರ ಪ್ರೀತಿ ಶಾಶ್ವತವಾಗಿರುವುದು.

2 "ದೇವರ ಪ್ರೀತಿಯು ಯುಗಯುಗಕ್ಕೂ ಇದೆ,"

ಎಂದು ಇಸ್ರಾಯೇಲ್ ಹೇಳಲಿ.

3 "ದೇವರ ಪ್ರೀತಿಯು ಸದಾಕಾಲವೂ ಇರುವುದು,"

ಎಂದು ಆರೋನನ ಮನೆಯವರು ಹೇಳಲಿ.

4 "ದೇವರ ಪ್ರೀತಿಯು ಸದಾಕಾಲವೂ ಇರುವುದು,"

ಎಂದು ಯೆಹೋವ ದೇವರಿಗೆ ಭಯಪಡುವವರು ಹೇಳಲಿ.

5 ಇಕ್ಕಟ್ಟಿನೊಳಗಿಂದ ಯೆಹೋವ ದೇವರಿಗೆ ಕೂಗಿದೆನು;

ಯೆಹೋವ ದೇವರು ಉತ್ತರಕೊಟ್ಟು, ನನ್ನನ್ನು ವಿಶಾಲವಾದ ಸ್ಥಳಕ್ಕೆ ತಂದರು.

6 ಯೆಹೋವ ದೇವರು ನನ್ನ ಪರವಾಗಿದ್ದಾರೆ, ನಾನು ಭಯಪಡೆನು.

ಮನುಷ್ಯನು ನನಗೆ ಏನು ಮಾಡಬಲ್ಲನು?

7 ಯೆಹೋವ ದೇವರು ನನ್ನೊಂದಿಗಿದ್ದಾರೆ, ಅವರು ನನಗೆ ಸಹಾಯಕರು;

ನಾನು ವೈರಿಗಳ ಮೇಲೆ ಜಯ ಸಾಧಿಸುವೆನು.

8 ಮನುಷ್ಯರಲ್ಲಿ ಭರವಸೆ ಇಡುವುದಕ್ಕಿಂತ

ಯೆಹೋವ ದೇವರಲ್ಲಿ ಆಶ್ರಯ ಪಡೆಯುವುದು ಒಳ್ಳೆಯದು.

9 ಅಧಿಪತಿಗಳಲ್ಲಿ ಭರವಸೆ ಇಡುವುದಕ್ಕಿಂತ

ಯೆಹೋವ ದೇವರ ಆಶ್ರಯ ಪಡೆಯುವುದು ಒಳ್ಳೆಯದು.

10 ಎಲ್ಲಾ ರಾಷ್ಟ್ರದವರು ನನ್ನನ್ನು ಸುತ್ತಿಕೊಂಡರು;

ಆದರೆ ನಾನು ಯೆಹೋವ ದೇವರ ಹೆಸರಿನಲ್ಲಿ ಅವರನ್ನು ದಂಡಿಸುವೆನು.

11 ಅವರು ನನ್ನನ್ನು ಎಲ್ಲಾ ದಿಕ್ಕುಗಳಿಂದ ಸುತ್ತಿಕೊಂಡರು;

ಯೆಹೋವ ದೇವರ ಹೆಸರಿನಲ್ಲಿ ಅವರನ್ನು ಸೋಲಿಸುವೆನು.

12 ಜೇನುನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ,

ಅವರು ಮುಳ್ಳಿನ ಬೆಂಕಿಯ ಹಾಗೆ ಕ್ಷಣಮಾತ್ರದಲ್ಲಿ ಇಲ್ಲವಾಗಿ ಹೋದರು;

ಯೆಹೋವ ದೇವರ ಹೆಸರಿನಲ್ಲಿ ನಾನು ಅವರನ್ನು ಸೋಲಿಸುವೆನು.

13 ನಾನು ಬೀಳುವ ಹಾಗೆ ವೈರಿಯು ನನ್ನನ್ನು ನೂಕಿದನು;

ಆದರೆ ಯೆಹೋವ ದೇವರು ನನಗೆ ಸಹಾಯ ಮಾಡಿದರು.

14 ನನ್ನ ಬಲವೂ, ಬೆಂಬಲವೂ ಯೆಹೋವ ದೇವರೇ;

ಅವರೇ ನನಗೆ ರಕ್ಷಣೆಯಾದರು.

15 ಜಯಘೋಷವೂ ಹರ್ಷಧ್ವನಿಯೂ

ನೀತಿವಂತರ ಗುಡಾರಗಳಲ್ಲಿ ಪ್ರತಿಧ್ವನಿಸುತ್ತಿರುವುದು;

ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.

16 ಯೆಹೋವ ದೇವರ ಬಲಗೈ ಎತ್ತರವಾಗಿ ಎತ್ತಲಾಗಿದೆ;

ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.

17 ನಾನು ಸಾಯದೆ ಬದುಕಿರುವೆನು,

ಯೆಹೋವ ದೇವರು ಮಾಡಿದ್ದನ್ನು ಸಾರುವೆನು.

18 ಏಕೆಂದರೆ ಯೆಹೋವ ದೇವರು ನನ್ನನ್ನು ಕಠಿಣವಾಗಿ ಶಿಕ್ಷಿಸಿದರು;

ಆದರೆ ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.

19 ನೀತಿಯ ಬಾಗಿಲುಗಳನ್ನು ನನಗೆ ತೆರೆಯಿರಿ;

ಅವುಗಳೊಳಗೆ ಪ್ರವೇಶಿಸಿ ಯೆಹೋವ ದೇವರಿಗೆ ಧನ್ಯವಾದ ಸಲ್ಲಿಸು.

20 ಇದೇ ಯೆಹೋವ ದೇವರ ಬಾಗಿಲು;

ನೀತಿವಂತರು ಇದರಲ್ಲಿ ಪ್ರವೇಶಿಸುವರು.

21 ನಿಮಗೆ ಕೃತಜ್ಞತಾವಂದನೆ ಸಲ್ಲಿಸುವೆನು;

ಏಕೆಂದರೆ ನನಗೆ ನೀವು ಉತ್ತರಕೊಟ್ಟು, ನನಗೆ ರಕ್ಷಣೆಯಾದಿರಿ.

22 ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ

ಮುಖ್ಯವಾದ ಮೂಲೆಗಲ್ಲಾಯಿತು.

23 ಇದು ಯೆಹೋವ ದೇವರಿಂದಲೇ ಉಂಟಾಯಿತು;

ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಯಿತು.

24 ಯೆಹೋವ ದೇವರು ಮಾಡಿದ ದಿನವು ಇದೇ;

ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡೋಣ.

25 ಯೆಹೋವ ದೇವರೇ ನಮ್ಮನ್ನು ರಕ್ಷಿಸಿರಿ,

ಯೆಹೋವ ದೇವರೇ ನಮಗೆ ಜಯಕೊಡಿರಿ.

26 ಯೆಹೋವ ದೇವರ ಹೆಸರಿನಲ್ಲಿ ಬರುವವನು ಧನ್ಯನು;

ಯೆಹೋವ ದೇವರ ಆಲಯದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸುವೆವು.

27 ಯೆಹೋವ ದೇವರು ದೇವರಾಗಿದ್ದಾನೆ;

ನಮ್ಮ ಮೇಲೆ ಅವರ ಬೆಳಕನ್ನು ಪ್ರಕಾಶಿಸುವಂತೆ ಮಾಡಿದ್ದಾರೆ.

ಕೊಂಬೆಗಳನ್ನು ಕೈಯಲ್ಲಿ ಹಿಡಿದುಕೊಂಡು

ಬಲಿಪೀಠದ ಕೊಂಬುಗಳವರೆಗೆ ಮೆರವಣಿಗೆಯಾಗಿ ಬನ್ನಿರಿ.

28 ನೀವು ನನ್ನ ದೇವರಾಗಿದ್ದೀರಿ, ನಿಮಗೆ ಉಪಕಾರ ಸಲ್ಲಿಸುವೆನು;

ನೀವು ನನ್ನ ದೇವರು; ನಿಮ್ಮನ್ನು ನಾನು ಉನ್ನತಪಡಿಸುವೆನು.

29 ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ; ಅವರು ಒಳ್ಳೆಯವರು;

ಅವರ ಪ್ರೀತಿ ಶಾಶ್ವತವಾಗಿರುವುದು.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-