Publicidade

Salmos 142

ದಾವೀದನ ಮಾಸ್ಕಿಲ ರಾಗದ ಪದ್ಯ. ಅವನು ಗುಹೆಯಲ್ಲಿ ಅಡಗಿಕೊಂಡಿದ್ದಾಗ ಮಾಡಿದ ಪ್ರಾರ್ಥನೆ.

1 ನನ್ನ ಸ್ವರವೆತ್ತಿ ಯೆಹೋವ ದೇವರಿಗೆ ಮೊರೆಯಿಟ್ಟಿದ್ದೇನೆ;

ಸ್ವರವೆತ್ತಿ ನನ್ನ ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದೇನೆ.

2 ದೇವರ ಮುಂದೆ ನನ್ನ ಚಿಂತೆಯನ್ನು ಹೊಯ್ದಿದ್ದೇನೆ;

ನನ್ನ ಇಕ್ಕಟ್ಟನ್ನು ದೇವರ ಮುಂದೆ ತಿಳಿಸಿದ್ದೇನೆ.

3 ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ,

ದೇವರೇ ನೀವು ನನ್ನ ದಾರಿಯನ್ನು ಕಾಯುತ್ತೀರಿ;

ನಾನು ನಡೆಯುವ ದಾರಿಯಲ್ಲಿ ವೈರಿಗಳು ಗುಪ್ತವಾಗಿ

ನನಗೆ ಉರುಲನ್ನು ಒಡ್ಡಿದ್ದಾರೆ.

4 ನೋಡಿರಿ ನನ್ನ ಬಲಗಡೆಯಲ್ಲಿ,

ನನ್ನ ಪರವಾಗಿ ಯಾರೂ ಇಲ್ಲ;

ಆಶ್ರಯವು ನನಗೆ ಇಲ್ಲ;

ನನಗಾಗಿ ಚಿಂತಿಸುವವರು ಯಾರೂ ಇಲ್ಲ.

5 ಯೆಹೋವ ದೇವರೇ, ನಿಮಗೆ ಹೀಗೆಂದು ಮೊರೆಯಿಡುತ್ತೇನೆ:

"ನೀವು ನನ್ನ ಆಶ್ರಯವೂ,

ಜೀವಿತರ ದೇಶದಲ್ಲಿ ನನ್ನ ಪಾಲೂ ಆಗಿದ್ದೀರಿ."

6 ನನ್ನ ಕೂಗನ್ನು ಆಲೈಸಿರಿ,

ಏಕೆಂದರೆ ನಾನು ಬಹಳ ಕುಂದಿಹೋಗಿದ್ದೇನೆ;

ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸಿರಿ,

ಏಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ.

7 ನಿಮ್ಮ ಹೆಸರನ್ನು ಕೊಂಡಾಡುವ

ಹಾಗೆ ನನ್ನ ಸೆರೆಯಿಂದ ನನ್ನನ್ನು ಬಿಡಿಸಿರಿ;

ಆಗ ನೀವು ನನಗೆ ಮಾಡಿದ ಉಪಕಾರವನ್ನು ಕಂಡು

ನೀತಿವಂತರು ನನ್ನ ಹತ್ತಿರ ಸೇರಿಬರುವರು.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-