Publicidade

Salmos 101

ದಾವೀದನ ಕೀರ್ತನೆ.

1 ನಿಮ್ಮ ಪ್ರೀತಿ ನೀತಿಗಳನ್ನು ಕುರಿತು ಹಾಡುವೆನು;

ಯೆಹೋವ ದೇವರೇ, ನಿಮ್ಮನ್ನು ಸ್ತುತಿಸುವೆನು.

2 ದೋಷರಹಿತ ಮಾರ್ಗದಲ್ಲಿ ನಡೆಯಲು ಜಾಗರೂಕನಾಗಿರುವೆನು;

ನೀವು ಯಾವಾಗ ನನ್ನ ಬಳಿಗೆ ಬರುವಿರಿ?

ನಾನು ನಿರ್ದೋಷ ಹೃದಯದಿಂದ

ನನ್ನ ಮನೆಯೊಳಗೆ ನಡೆದುಕೊಳ್ಳುವೆನು.

3 ನಾನು ಕೆಟ್ಟ ಕಾರ್ಯವನ್ನು

ನನ್ನ ಕಣ್ಣುಗಳ ಮುಂದೆ ಒಪ್ಪಿಗೆಯಿಂದ ನೋಡುವುದಿಲ್ಲ.

ಅವಿಶ್ವಾಸಿಗಳು ಮಾಡುವುದನ್ನು ದ್ವೇಷಿಸುವೆನು;

ಅದರಲ್ಲಿ ನಾನು ಭಾಗವಹಿಸುವುದಿಲ್ಲ.

4 ಮೂರ್ಖಜನರು ನನ್ನಿಂದ ದೂರವಿರುವರು;

ದುಷ್ಟತನವನ್ನು ಅರಿಯದಿರುವೆನು.

5 ಮರೆಯಾಗಿ ನೆರೆಯವನ ಮೇಲೆ

ಚಾಡಿ ಹೇಳುವವನನ್ನು ಸುಮ್ಮನಿರಿಸುವೆನು;

ಗರ್ವದ ಕಣ್ಣೂ, ಅಹಂಕಾರದ ಹೃದಯವೂ

ಉಳ್ಳವನನ್ನು ಸಹಿಸಲಾರೆನು.

6 ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು;

ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು;

ನಿಷ್ಕಳಂಕವಾಗಿ ನಡೆಯುವವರೇ

ನನ್ನ ಸೇವೆಯಲ್ಲಿರಬೇಕು.

7 ಮೋಸ ಮಾಡುವವನು ನನ್ನ ಮನೆಯೊಳಗೆ ವಾಸಮಾಡನು;

ಸುಳ್ಳಾಡುವವನು ನನ್ನ ಕಣ್ಣುಗಳ ಮುಂದೆ ನಿಂತುಕೊಳ್ಳನು.

8 ದುಷ್ಟತನ ಮಾಡುವವರೆಲ್ಲರನ್ನು

ಪ್ರತಿ ಮುಂಜಾನೆ ನಿಲ್ಲಿಸಿಬಿಡುವೆನು;

ಯೆಹೋವ ದೇವರ ಪಟ್ಟಣದೊಳಗಿಂದ

ಪ್ರತಿಯೊಬ್ಬ ದುಷ್ಟನನ್ನು ಹೊರಗೆ ಹಾಕುವೆನು.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-