Publicidade

Salmos 31

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.

1 ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿಕೊಂಡಿದ್ದೇನೆ;

ನಾನು ಎಂದಿಗೂ ನಾಚಿಕೆಪಡದಂತೆ ಮಾಡಿರಿ;

ನಿಮ್ಮ ನೀತಿಯಲ್ಲಿ ನನ್ನನ್ನು ವಿಮೋಚಿಸಿರಿ.

2 ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ;

ಬೇಗ ಬಂದು ನನ್ನನ್ನು ಬಿಡಿಸಿರಿ;

ನನ್ನನ್ನು ರಕ್ಷಿಸುವುದಕ್ಕೆ ನನ್ನ ಆಶ್ರಯದ ಬಂಡೆಯೂ,

ಬಲವಾದ ಕೋಟೆಯೂ ಆಗಿರಿ.

3 ನನ್ನ ಬಂಡೆಯೂ ನನ್ನ ಕೋಟೆಯೂ ನೀವೇ;

ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ನಡೆಸಿರಿ; ನನಗೆ ಮಾರ್ಗದರ್ಶಕರಾಗಿರಿ.

4 ವೈರಿಯು ಗುಪ್ತವಾಗಿ ಒಡ್ಡಿದ ಬಲೆಯೊಳಗಿಂದ ನನ್ನನ್ನು ಹೊರಗೆ ಎಳೆಯಿರಿ;

ನೀವೇ ನನಗೆ ಆಶ್ರಯ.

5 ನಿಮ್ಮ ಕೈಗೆ ನನ್ನ ಆತ್ಮವನ್ನು ಒಪ್ಪಿಸಿದ್ದೇನೆ;

ನಂಬಿಗಸ್ತದ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನನ್ನು ವಿಮೋಚಿಸಿದ್ದೀರಿ.

6 ದೇವರಲ್ಲದವುಗಳನ್ನು ಅನುಸರಿಸುವವರಿಂದ ನಾನು ಪ್ರತ್ಯೇಕವಾಗಿದ್ದೇನೆ;

ನಾನು ಯೆಹೋವ ದೇವರಲ್ಲಿಯೇ ಭರವಸೆ ಇಟ್ಟಿದ್ದೇನೆ.

7 ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಉಲ್ಲಾಸಿಸಿ ಸಂತೋಷ ಪಡುವೆನು;

ಏಕೆಂದರೆ ನೀವು ನನ್ನ ಕಷ್ಟಗಳನ್ನು ಲಕ್ಷ್ಯಕ್ಕೆ ತಂದು,

ನನ್ನ ಪ್ರಾಣದ ಸಂಕಟಗಳನ್ನು ಅರಿತಿದ್ದೀರಿ.

8 ಶತ್ರುವಿನ ಕೈಯಲ್ಲಿ ನನ್ನನ್ನು ಒಪ್ಪಿಸಿ ಬಿಡಲಿಲ್ಲ;

ನನ್ನ ಪಾದಗಳನ್ನು ವಿಶಾಲವಾದ ಸ್ಥಳದಲ್ಲಿ ನಿಲ್ಲಿಸಿದ್ದೀರಿ.

9 ಯೆಹೋವ ದೇವರೇ, ನನ್ನನ್ನು ಕರುಣಿಸಿರಿ, ನಾನು ಇಕ್ಕಟ್ಟಿನಲ್ಲಿದ್ದೇನೆ;

ನನ್ನ ಕಣ್ಣೂ ನನ್ನ ಪ್ರಾಣವೂ

ನನ್ನ ದೇಹವೂ ದುಃಖದಿಂದ ಕ್ಷೀಣವಾಗಿವೆ.

10 ನನ್ನ ಜೀವವು ಚಿಂತೆಯಿಂದಲೂ,

ನನ್ನ ವರ್ಷಗಳು ನಿಟ್ಟುಸಿರಿನಿಂದಲೂ ಕಳೆದುಹೋಗಿವೆ;

ನನ್ನ ಅಪರಾಧದಿಂದ ನನ್ನ ಶಕ್ತಿಯು ಕುಂದಿಹೋಗಿದೆ;

ನನ್ನ ಎಲುಬುಗಳು ಕ್ಷೀಣವಾಗಿವೆ.

11 ನನ್ನ ವೈರಿಗಳೆಲ್ಲರ ನಿಮಿತ್ತವಾಗಿ

ನನ್ನ ನೆರೆಯವರಿಗೆ ನಾನು ನಿಂದೆಯೂ,

ಮಿತ್ರರಿಗೆ ಹೆದರಿಕೆಯೂ ಆಗಿದ್ದೇನೆ;

ದಾರಿಯಲ್ಲಿ ನನ್ನನ್ನು ಕಂಡವರು ನನ್ನನ್ನು ಬಿಟ್ಟು ಓಡಿಹೋಗುತ್ತಾರೆ.

12 ನಾನು ಸತ್ತುಹೋದವರಂತೆ ಎಲ್ಲರು ನನ್ನನ್ನು ಮರೆತುಬಿಟ್ಟಿದ್ದಾರೆ;

ನಾನು ಒಡೆದ ಮಡಕೆಯಂತೆ ಇದ್ದೇನೆ.

13 ಅನೇಕರು ಹೀಗೆ ಪಿಸುಗುಟ್ಟುವುದನ್ನು ಕೇಳಿದ್ದೇನೆ.

ಸುತ್ತಲೂ ಅಂಜಿಕೆ ಇದೆ;

ಅನೇಕರು ನನ್ನ ಪ್ರಾಣವನ್ನು ತೆಗೆಯಬೇಕೆಂದು

ಒಳಸಂಚು ಮಾಡುತ್ತಿದ್ದಾರೆ.

14 ಯೆಹೋವ ದೇವರೇ, ನಾನು ನಿಮ್ಮಲ್ಲಿ ಭರವಸೆ ಇಟ್ಟಿದ್ದೇನೆ;

"ನನ್ನ ದೇವರು ನೀವೇ," ಎಂದು ಹೇಳಿಕೊಂಡಿದ್ದೇನೆ.

15 ನನ್ನ ಸಮಯವು ನಿಮ್ಮ ಕೈಯಲ್ಲಿ ಇವೆ;

ನನ್ನ ಶತ್ರುಗಳ ಕೈಯಿಂದಲೂ

ಹಿಂಸೆಪಡಿಸುವವರಿಂದಲೂ ನನ್ನನ್ನು ಬಿಡಿಸಿರಿ.

16 ನಿಮ್ಮ ಮುಖವು ನಿಮ್ಮ ಸೇವಕನ ಮೇಲೆ ಪ್ರಕಾಶಿಸಲಿ;

ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನನ್ನು ರಕ್ಷಿಸಿರಿ.

17 ಯೆಹೋವ ದೇವರೇ, ನಾನು ನಾಚಿಕೆಪಡದಂತೆ ಮಾಡಿರಿ;

ನಾನು ನಿಮಗೆ ಮೊರೆಯಿಟ್ಟಿದ್ದೇನೆ;

ದುಷ್ಟರು ನಾಚಿಕೆಪಡಲಿ;

ಅವರು ಸಮಾಧಿ ಸೇರಲಿ.

18 ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ,

ಕಠಿಣವಾಗಿಯೂ ಮಾತನಾಡುವ

ಸುಳ್ಳಿನ ತುಟಿಗಳು ಮೌನವಾಗಲಿ.

19 ನಿಮ್ಮ ಒಳ್ಳೆಯತನವು ಎಷ್ಟೋ ಸಮೃದ್ಧ;

ನೀವು ನಿಮಗೆ ಭಯಪಡುವವರಿಗೋಸ್ಕರ ಆ ಒಳ್ಳೆಯತನವನ್ನಿಟ್ಟಿದ್ದೀರಿ,

ನಿಮ್ಮನ್ನು ಆಶ್ರಯಿಸಿಕೊಳ್ಳುವವರಿಗೆ

ನೀವು ನಿಮ್ಮ ಒಳ್ಳೆಯತನವನ್ನು ಎಲ್ಲರ ಮುಂದೆ ದಯಪಾಲಿಸಿದ್ದೀರಿ.

20 ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ

ನೀವು ಅವರನ್ನು ನಿಮ್ಮ ಸಾನಿಧ್ಯದಲ್ಲಿಯೇ ಮರೆಮಾಡುತ್ತೀರಿ;

ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ

ಅವರನ್ನು ನಿಮ್ಮ ನಿವಾಸದಲ್ಲಿ ಅಡಗಿಸುತ್ತೀರಿ.

21 ಯೆಹೋವ ದೇವರಿಗೆ ಸ್ತುತಿಯುಂಟಾಗಲಿ;

ಮುತ್ತಿಗೆ ಹಾಕಲಾದ ನಗರದಲ್ಲಿದ್ದ ನನಗೆ

ದೇವರು ಆಶ್ಚರ್ಯಕರವಾದ ಒಡಂಬಡಿಕೆಯ ಪ್ರೀತಿಯನ್ನು ತೋರಿಸಿದ್ದಾರೆ.

22 "ನಾನು ನಿಮ್ಮ ಕಣ್ಣುಗಳ ಎದುರಿನಿಂದ ತೆಗೆದು ಹಾಕಲಾಗಿದ್ದೇನೆ" ಎಂದು

ನನ್ನ ಗಾಬರಿಯಲ್ಲಿ ಹೇಳಿದೆನು;

ಆದರೂ ನಾನು ಸಹಾಯಕ್ಕಾಗಿ ನಿಮಗೆ ಮೊರೆಯಿಡಲು

ನೀವು ಕರುಣೆಗಾಗಿ ಕೂಗಿದ್ದನ್ನು ಕೇಳಿದ್ದೀರಿ.

23 ಭಕ್ತರೇ, ಯೆಹೋವ ದೇವರನ್ನು ಪ್ರೀತಿಸಿರಿ;

ಯೆಹೋವ ದೇವರು ನಂಬಿಗಸ್ತರನ್ನು ಕಾಯುತ್ತಾರೆ;

ಅಹಂಕಾರಿಗೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ.

24 ಯೆಹೋವ ದೇವರಲ್ಲಿ ನಿರೀಕ್ಷಿಸುವವರೆಲ್ಲರೂ ದೃಢವಾಗಿರಿ;

ನಿಮ್ಮ ಹೃದಯವು ಧೈರ್ಯದಿಂದ ಇರಲಿ.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-