Pular para o conteúdo
Publicidade

ಕೀರ್ತನೆಗಳು 72

ಸೊಲೊಮೋನನ ಕೀರ್ತನೆ.

1 ದೇವರೇ, ನಿಮ್ಮ ನ್ಯಾಯವನ್ನು ಅರಸನಿಗೆ ಕಲಿಸಿಕೊಡಿರಿ.

ನಿಮ್ಮ ನೀತಿಯನ್ನು ರಾಜಕುಮಾರನಿಗೆ ಕಲಿಸಿಕೊಡಿರಿ.

2 ಅರಸನು ನಿಮ್ಮ ಜನರಿಗೆ ನೀತಿಯಿಂದಲೂ

ನಿಮ್ಮ ಬಾಧೆಪಟ್ಟ ಪ್ರಜೆಗೆ ನ್ಯಾಯದಿಂದಲೂ ತೀರ್ಪುಮಾಡಲಿ.

3 ಬೆಟ್ಟಗುಡ್ಡಗಳಿಂದ ಸಮೃದ್ಧಿಯೂ

ನೀತಿಯ ಫಲವೂ ಜನರಿಗೆ ಬರಲಿ.

4 ಅರಸನು ಬಡವರ ನ್ಯಾಯ ಸ್ಥಾಪಿಸಲಿ.

ಅವನು ಅಗತ್ಯತೆಯಲ್ಲಿರುವವರ ಮಕ್ಕಳನ್ನು ರಕ್ಷಿಸಲಿ.

ದಬ್ಬಾಳಿಕೆ ಮಾಡುವವರನ್ನು ದಂಡಿಸಲಿ.

5 ಸೂರ್ಯನೂ ಚಂದ್ರನೂ ಇರುವವರೆಗೆ

ತಲತಲಾಂತರಗಳು ಜನರು ಅರಸನಿಗೆ ಭಯಪಡಲಿ.

6 ಕೊಯ್ದ ಹುಲ್ಲಿನ ಮೇಲೆ ಬೀಳುವ ಮಳೆಯ ಹಾಗೆಯೂ,

ಭೂಮಿಯನ್ನು ನೆನಸುತ್ತಾ ಸುರಿಯುವ ಮಳೆಗಳ ಹಾಗೆಯೂ ಅರಸನು ಇರಲಿ.

7 ಅರಸನ ದಿವಸಗಳಲ್ಲಿ ನೀತಿವಂತರು ವೃದ್ಧಿ ಆಗಲಿ.

ಸಮೃದ್ಧಿಯಾದ ಸಮಾಧಾನವು ಚಂದ್ರನು ಇರುವವರೆಗೂ ಇರಲಿ.

8 ಸಮುದ್ರದಿಂದ ಸಮುದ್ರದವರೆಗೂ

ನದಿಯಿಂದ ಭೂಮಿಯ ಕೊನೆಗಳವರೆಗೂ ಅರಸನು ಆಳಲಿ.

9 ಅರಸನ ಮುಂದೆ ಮರುಭೂಮಿಯ ನಿವಾಸಿಗಳು ಎರಗಲಿ.

ಅರಸನ ಶತ್ರುಗಳು ಧೂಳನ್ನು ನೆಕ್ಕಲಿ.

10 ತಾರ್ಷೀಷಿನ ಅರಸರೂ

ದ್ವೀಪಗಳ ಅರಸರೂ ಕಾಣಿಕೆಗಳನ್ನು ಅರಸನಿಗೆ ಸಲ್ಲಿಸಲಿ.

ಶೆಬ ಮತ್ತು ಸೆಬದ ಅರಸರು

ದಾನಗಳನ್ನು ತಂದೊಪ್ಪಿಸಲಿ.

11 ಹೌದು, ಎಲ್ಲಾ ಅರಸರು ನಮ್ಮ ಅರಸನ ಮುಂದೆ ಅಡ್ಡಬೀಳಲಿ.

ಎಲ್ಲಾ ಜನಾಂಗಗಳು ಅರಸನಿಗೆ ಸೇವೆಸಲ್ಲಿಸಲಿ.

12 ಏಕೆಂದರೆ ಅರಸನಿಗೆ ಮೊರೆಯಿಡುವ ಬಡವರನ್ನೂ

ಸಹಾಯಕನಿಲ್ಲದ ಬಾಧೆಪಡುವವರನ್ನೂ ಬಿಡಿಸುವನು.

13 ದರಿದ್ರನನ್ನೂ, ಬಡವನನ್ನೂ ಕರುಣಿಸುವನು.

ಬಡವರ ಪ್ರಾಣಗಳನ್ನು ರಕ್ಷಿಸುವನು.

14 ಮೋಸ ದಬ್ಬಾಳಿಕೆಯಿಂದ ಜನರನ್ನು ಬಿಡುಗಡೆ ಮಾಡುವನು.

ಜನರ ಜೀವವು ಆತನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.

15 ಅರಸನು ಬಾಳಲಿ.

ಆತನಿಗೆ ಶೆಬದ ಚಿನ್ನವನ್ನು ಕೊಡಲಿ.

ಆತನಿಗೋಸ್ಕರ ಯಾವಾಗಲೂ ಪ್ರಾರ್ಥನೆ ಮಾಡಲಿ.

ಇಡೀ ದಿನ ಆತನಿಗೆ ಆಶೀರ್ವಾದಗಳು ಉಂಟಾಗಲಿ.

16 ಧಾನ್ಯದ ಸಮೃದ್ಧಿಯು ದೇಶದಲ್ಲಿ

ಬೆಟ್ಟಗಳ ತುದಿಯವರೆಗೂ ಇರಲಿ;

ಅದರ ಫಲವು ಲೆಬನೋನಿನ ಹಾಗೆ ಸಮೃದ್ಧಿಯಾಗಲಿ;

ಪಟ್ಟಣದವರು ಭೂಮಿಯ ಸೊಪ್ಪಿನ ಹಾಗೆ ವೃದ್ಧಿ ಆಗಲಿ.

17 ಅರಸನ ನಾಮವು ಎಂದೆಂದಿಗೂ ಇರಲಿ.

ಸೂರ್ಯನಿರುವವರೆಗೂ ಆತನ ಹೆಸರು ಇರಲಿ.

ಮನುಷ್ಯರು ಅರಸನಲ್ಲಿ ಆಶೀರ್ವಾದ ಹೊಂದಲಿ.

ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತನೆಂದು ಕರೆಯಲಿ.

18 ಅದ್ಭುತಗಳನ್ನು ಮಾಡುವುದರಲ್ಲಿ ಸರಿಸಾಟಿಯಿಲ್ಲದ

ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ.

19 ದೇವರ ಘನವುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ.

ದೇವರ ತೇಜಸ್ಸು ಭೂಮಿಯಲ್ಲೆಲ್ಲಾ ತುಂಬಲಿ.

ಆಮೆನ್, ಆಮೆನ್.

20 ಇಷಯನ ಮಗ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯವಾಗುತ್ತವೆ.

Estes versículos te tocaram? Ore agora!

+581 estão orando agora.

Junte-se à corrente de oração.