Publicidade

Salmos 27

ದಾವೀದನ ಕೀರ್ತನೆ.

1 ಯೆಹೋವ ದೇವರು ನನ್ನ ಬೆಳಕೂ ನನ್ನ ರಕ್ಷಣೆಯೂ ಆಗಿದ್ದಾರೆ.

ನಾನು ಯಾರಿಗೂ ಭಯಪಡೆನು?

ಯೆಹೋವ ದೇವರು ನನ್ನ ಜೀವದ ಭದ್ರಾಶ್ರಯವಾಗಿದ್ದಾರೆ.

ನಾನು ಯಾರಿಗೂ ಹೆದರೆನು?

2 ದುಷ್ಟರು ನನ್ನನ್ನು ಬೀಳಿಸಬೇಕೆಂದು

ನನಗೆ ವಿರೋಧವಾಗಿ ಸಮೀಪಿಸುವಾಗ,

ನನ್ನ ವೈರಿಗಳು

ತಾವೇ ಎಡವಿಬಿದ್ದರು.

3 ನನಗೆ ವಿರೋಧವಾಗಿ ಇಳಿದರೂ

ನನ್ನ ಹೃದಯವು ಭಯಪಡದು;

ನನ್ನ ಮೇಲೆ ಯುದ್ಧ ಸೈನ್ಯವು ನಡೆದರೂ

ನಾನು ಭರವಸೆಯಿಂದಿರುವೆನು.

4 ಯೆಹೋವ ದೇವರ ಮನೆಯಲ್ಲಿ ನಾನು ಜೀವಮಾನವೆಲ್ಲಾ ವಾಸಮಾಡುತ್ತಾ,

ಅದರ ದಯೆಯನ್ನು ನೋಡುತ್ತಾ

ಅವರ ಮಂದಿರದಲ್ಲಿ ಅವರನ್ನೇ ಧ್ಯಾನಿಸುತ್ತಾ

ಇರಬೇಕೆಂಬ ಒಂದೇ ವರವನ್ನು

ಯೆಹೋವ ದೇವರಿಂದ ಕೇಳಿಕೊಂಡು

ಅದನ್ನೇ ಹುಡುಕುತ್ತಿರುವೆನು.

5 ಕೇಡಿನ ಸಮಯದಲ್ಲಿ ಯೆಹೋವ ದೇವರು ನನ್ನನ್ನು

ತಮ್ಮ ಗುಡಾರದಲ್ಲಿ ಬಚ್ಚಿಡುವರು.

ತಮ್ಮ ಪರಿಶುದ್ಧ ಗುಡಾರದಲ್ಲಿ ನನ್ನನ್ನು ಮರೆಮಾಡುವರು.

ಎತ್ತರವಾದ ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವರು.

6 ಈಗ ನನ್ನ ತಲೆಯು ನನ್ನ ಸುತ್ತಲಿರುವ

ನನ್ನ ಶತ್ರುಗಳ ಮೇಲೆ ಎತ್ತಲಾಗಿರುವುದು,

ಆದ್ದರಿಂದ ದೇವರ ಗುಡಾರದಲ್ಲಿ ಉತ್ಸಾಹದಿಂದ ಬಲಿಗಳನ್ನು ಅರ್ಪಿಸುವೆನು;

ಯೆಹೋವ ದೇವರಿಗೆ ಹಾಡಿ ಕೊಂಡಾಡುವೆನು.

7 ಯೆಹೋವ ದೇವರೇ, ನಾನು ಕೂಗುವ ಸ್ವರವನ್ನು ಕೇಳಿರಿ;

ನನ್ನನ್ನು ಕರುಣಿಸಿ ಉತ್ತರವನ್ನು ಕೊಡಿರಿ.

8 ನಿಮ್ಮ ಬಗ್ಗೆ ನನ್ನ ಹೃದಯವು ಹೀಗೆ ಹೇಳುತ್ತದೆ: "ದೇವರ ಮುಖವನ್ನು ಹುಡುಕು,"

ಆದ್ದರಿಂದ ಯೆಹೋವ ದೇವರೇ, ನಿಮ್ಮ ಮುಖವನ್ನೇ ಹುಡುಕುತ್ತಿರುವೆನು.

9 ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ;

ನಿಮ್ಮ ಸೇವಕನಾದ ನನ್ನನ್ನು ತಳ್ಳಬೇಡಿರಿ;

ನೀವೇ ನನಗೆ ಸಹಾಯಕರಾಗಿದ್ದೀರಿ;

ನನ್ನ ರಕ್ಷಕ ಆಗಿರುವ ದೇವರೇ, ನನ್ನನ್ನು ತ್ಯಜಿಸಬೇಡಿರಿ.

ನನ್ನನ್ನು ಬಿಟ್ಟುಬಿಡಬೇಡಿರಿ.

10 ನನ್ನ ತಂದೆತಾಯಂದಿರು ನನ್ನನ್ನು ಬಿಟ್ಟುಬಿಟ್ಟರೂ,

ಯೆಹೋವ ದೇವರು ನನ್ನನ್ನು ಸೇರಿಸಿಕೊಳ್ಳುವರು.

11 ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ;

ನನ್ನ ವಿರೋಧಿಗಳ ನಿಮಿತ್ತ

ಸಮಹಾದಿಯಲ್ಲಿ ನನ್ನನ್ನು ನಡೆಸಿರಿ.

12 ನನ್ನ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡಿರಿ;

ಸುಳ್ಳುಸಾಕ್ಷಿಗಳೂ ಕ್ರೂರ ನಿಂದಕರೂ

ನನಗೆ ವಿರೋಧವಾಗಿ ಎದ್ದಿದ್ದಾರೆ.

13 ಇದೊಂದು ನನ್ನ ಭರವಸೆಯಾಗಿರುವುದು:

ನಾನಂತೂ ಯೆಹೋವ ದೇವರ ಒಳಿತನ್ನು

ಜೀವಿತರ ದೇಶದಲ್ಲಿ ಕಾಣುವೆನು.

14 ಯೆಹೋವ ದೇವರಿಗಾಗಿ ಕಾದಿರು, ಧೈರ್ಯವಾಗಿರು;

ಅವರು ನಿನ್ನ ಹೃದಯವನ್ನು ದೃಢಪಡಿಸುವರು;

ಯೆಹೋವ ದೇವರಿಗಾಗಿ ಕಾದಿರು.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-