Publicidade

Salmos 141

ದಾವೀದನ ಕೀರ್ತನೆ.

1 ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ, ನನ್ನ ಬಳಿಗೆ ಬರಲು ತ್ವರೆಪಡಿರಿ.

ನಾನು ನಿಮ್ಮನ್ನು ಕರೆಯುವಾಗ, ನನಗೆ ಕಿವಿಗೊಡಿರಿ.

2 ನನ್ನ ಪ್ರಾರ್ಥನೆ ನಿಮ್ಮ ಮುಂದೆ ಧೂಪವಾಗಿರಲಿ,

ನಾನು ನಿಮ್ಮ ಕಡೆ ಕೈ ಎತ್ತುವುದು ಸಾಯಂಕಾಲದ ಬಲಿಯಂತೆ ನಿಮಗೆ ಸಮರ್ಪಕವಾಗಿರಲಿ.

3 ಯೆಹೋವ ದೇವರೇ, ನನ್ನ ಬಾಯಿಗೆ ಕಾವಲಿಡಿರಿ;

ನನ್ನ ತುಟಿಗಳ ಕದವನ್ನು ಕಾಯಿರಿ;

4 ಅಪರಾಧ ಮಾಡುವವರ ಸಂಗಡ ನಾನು ಸಹ ಸೇರಿಕೊಂಡು

ಕೆಟ್ಟ ಕಾರ್ಯಗಳನ್ನು ಮಾಡಲು

ನನ್ನ ಹೃದಯ ಸೆಳೆಯದಂತೆ ಕಾಪಾಡಿರಿ;

ಅವರ ಸವಿ ಊಟಗಳನ್ನು ನಾನು ಉಣ್ಣದಿರಲಿ.

5 ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗೆ ಉಪಕಾರ.

ಅವರು ನನ್ನನ್ನು ಗದರಿಸಲಿ, ಅದು ನನ್ನ ತಲೆಗೆ ಅಭಿಷೇಕ;

ನನ್ನ ತಲೆ ಅದನ್ನು ಬೇಡವೆನ್ನದಿರಲಿ;

ಆದರೂ ನನ್ನ ಪ್ರಾರ್ಥನೆ ಯಾವಾಗಲೂ ದುಷ್ಟರ ಕಾರ್ಯಗಳಿಗೆ ವಿರೋಧವಾಗಿಯೇ ಇರುವುದು.

6 ಅವರ ನ್ಯಾಯಾಧಿಪತಿಗಳು ಉನ್ನತ ಸ್ಥಳದಿಂದ ಕೆಳಬಿದ್ದಾಗ

ಅವರು ನನ್ನ ಮಾತು ಕೇಳುವರು.

7 ಅವರು ಹೀಗೆ ಹೇಳುವರು, "ಒಬ್ಬನು ಹೊಲವನ್ನು ಉತ್ತು, ಹೆಂಟೆಗಳನ್ನು ಒಡೆದು

ಚದರಿಸುವ ಪ್ರಕಾರವೇ ನಮ್ಮ ಎಲುಬುಗಳು ಪಾತಾಳ ದ್ವಾರದಲ್ಲಿ ಎರಚಲಾಗುವುದು."

8 ಆದರೆ ಸಾರ್ವಭೌಮ ಯೆಹೋವ ದೇವರೇ, ನನ್ನ ಕಣ್ಣುಗಳು ನಿಮ್ಮ ಕಡೆ ಇವೆ;

ನಿಮ್ಮನ್ನು ಆಶ್ರಯಿಸಿಕೊಂಡಿದ್ದೇನೆ, ನನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಬೇಡಿರಿ.

9 ಅವರು ನನಗೆ ಒಡ್ಡಿದ ಉರುಲಿನಿಂದಲೂ,

ಅಪರಾಧಗಳ ನೇಣುಗಳಿಂದಲೂ ನನ್ನನ್ನು ಕಾಪಾಡಿರಿ.

10 ನಾನು ತಪ್ಪಿಸಿಕೊಂಡು ಸುರಕ್ಷಿತವಾಗಿ ಹೋಗುವಷ್ಟರಲ್ಲಿ

ದುಷ್ಟರು ತಮ್ಮ ಬಲೆಗಳಲ್ಲಿಯೇ ಬೀಳಲಿ.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-