Publicidade

Salmos 8

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಗಿತ್ತೀ ರಾಗದಲ್ಲಿ ಹಾಡತಕ್ಕದ್ದು. ದಾವೀದನ ಕೀರ್ತನೆ.

1 ನಮ್ಮ ಕರ್ತ ಆಗಿರುವ ಯೆಹೋವ ದೇವರೇ,

ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ವೈಭವವುಳ್ಳದ್ದಾಗಿದೆ!

ನೀವು ನಿಮ್ಮ ಮಹಿಮೆಯನ್ನು

ಆಕಾಶಗಳಲ್ಲಿ ಸ್ಥಾಪಿಸಿದ್ದೀರಿ.

2 ಸಣ್ಣ ಮಕ್ಕಳ ಮತ್ತು ಹಾಲುಣ್ಣುವ ಕೂಸುಗಳ ಸ್ತೋತ್ರದ ಮೂಲಕ

ನಿಮ್ಮ ಶತ್ರುಗಳ ವಿರೋಧವಾಗಿ ಭದ್ರಕೋಟೆಯನ್ನು ಸ್ಥಾಪಿಸಿ,

ನಿಮ್ಮ ವೈರಿಗಳನ್ನೂ ಮುಯ್ಯಿ ತೀರಿಸುವವರನ್ನೂ ನೀವು ಸುಮ್ಮಗಿರಿಸಿದ್ದೀರಿ.

3 ನಿಮ್ಮ ಬೆರಳಿನ ಸೃಷ್ಟಿಯಾದ ಆಕಾಶಮಂಡಲವನ್ನೂ

ನೀವು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ

ನಾನು ನೋಡಿದಾಗ,

4 ನೀವು ಮಾನವರನ್ನು ನೆನಸಲು ಅವರು ಎಷ್ಟರವರು?

ಮನುಷ್ಯಪುತ್ರನನ್ನು ಲಕ್ಷ್ಯವಿಡಲು ಅವನು ಯಾರು?

5 ನೀವು ಮನುಷ್ಯಪುತ್ರನನ್ನು ದೇವರಿಗಿಂತಲೂ ಸ್ವಲ್ಪ ಕಡಿಮೆ ಮಾಡಿ,

ಮಹಿಮೆಯನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿಟ್ಟಿದ್ದೀರಿ.

6 ನೀವು ನಿಮ್ಮ ಕೈಕೃತಿಗಳ ಮೇಲೆ ಅವನನ್ನು ಅಧಿಕಾರಿಯನ್ನಾಗಿ ಮಾಡಿ,

ಸಮಸ್ತವನ್ನೂ ಅವನ ಪಾದಗಳ ಕೆಳಗೆ ಹಾಕಿದ್ದೀರಿ:

7 ಎಲ್ಲಾ ಕುರಿದನಗಳನ್ನೂ

ಅಡವಿಯ ಮೃಗಗಳನ್ನೂ

8 ಆಕಾಶದ ಪಕ್ಷಿಗಳನ್ನೂ

ಸಮುದ್ರದ ಮೀನುಗಳನ್ನೂ ಸಮುದ್ರದ ಹಾದಿಗಳಲ್ಲಿ ಸಂಚರಿಸುವ ಎಲ್ಲ ವಿಧವಾದ ಜೀವಜಂತುಗಳನ್ನೂ

ಅವನ ಪಾದಗಳ ಕೆಳಗೆ ಹಾಕಿದ್ದೀರಿ.

9 ನಮ್ಮ ಕರ್ತ ಆಗಿರುವ ಯೆಹೋವ ದೇವರೇ,

ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದಾಗಿದೆ!

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-