Publicidade

Salmos 4

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ದಾವೀದನ ಕೀರ್ತನೆ.

1 ನನ್ನ ನೀತಿಯಾಗಿರುವ ದೇವರೇ,

ನಾನು ಕರೆಯುವಾಗ ನನಗೆ ಸದುತ್ತರವನ್ನು ಕೊಡಿರಿ.

ನನ್ನ ಸಂಕಟದಿಂದ ನನಗೆ ನೆಮ್ಮದಿಯನ್ನು ನೀಡಿರಿ;

ನನ್ನನ್ನು ಕರುಣಿಸಿ, ನನ್ನ ಪ್ರಾರ್ಥನೆಯನ್ನು ಕೇಳಿರಿ.

2 ಓ ಮಾನವ, ನೀನು ಎಲ್ಲಿಯತನಕ ನನ್ನ ಮಹಿಮೆಯನ್ನು ಅವಮಾನಕ್ಕೆ ಗುರಿಪಡಿಸುವಿ?

ನೀನು ಎಲ್ಲಿಯತನಕ ವ್ಯರ್ಥವಾದದ್ದನ್ನು ಪ್ರೀತಿಸಿ, ಸುಳ್ಳನ್ನು ಹುಡುಕುವಿ?

3 ಯೆಹೋವ ದೇವರು ತಮ್ಮ ನಂಬಿಗಸ್ತರನ್ನು

ತಮಗಾಗಿ ಪ್ರತ್ಯೇಕಿಸಿದ್ದಾರೆ ಎಂದು ತಿಳಿದುಕೊಳ್ಳಿರಿ;

ನಾನು ಬೇಡಿಕೊಳ್ಳಲು ಯೆಹೋವ ದೇವರು ನನಗೆ ಉತ್ತರ ನೀಡುವರು.

4 ನಡುಗಿರಿ, ಪಾಪಮಾಡಬೇಡಿರಿ;

ನೀವು ನಿಮ್ಮ ಹಾಸಿಗೆಯ ಮೇಲೆ ಇರುವಾಗ,

ನಿಮ್ಮ ಹೃದಯಗಳಲ್ಲಿ ಧ್ಯಾನಮಾಡಿ ಮೌನವಾಗಿರಿ.

5 ನೀತಿಯ ಬಲಿಗಳನ್ನು ಅರ್ಪಿಸಿರಿ

ಯೆಹೋವ ದೇವರಲ್ಲಿ ನಿಮ್ಮ ಭರವಸೆಯನ್ನು ಇಡಿರಿ.

6 ಯೆಹೋವ ದೇವರೇ, "ನಮಗೆ ಒಳ್ಳೆಯದನ್ನು ಮಾಡುವವರು ಯಾರು?"

ಎಂದು ಕೇಳುವವರು ಅನೇಕರಿದ್ದಾರೆ.

ನಿಮ್ಮ ಮುಖಪ್ರಕಾಶವು ನಮ್ಮ ಮೇಲೆ ಬೆಳಗಲಿ.

7 ಧಾನ್ಯವೂ ಹೊಸ ದ್ರಾಕ್ಷಾರಸವೂ ಸುಗ್ಗಿಕಾಲದಲ್ಲಿ

ಸಮೃದ್ಧಿಯಾದಾಗ ಇರುವುದಕ್ಕಿಂತಲೂ ಅಧಿಕವಾದ

ಆನಂದವನ್ನು ನೀವು ನನ್ನ ಹೃದಯದಲ್ಲಿ ಇಟ್ಟಿದ್ದೀರಿ.

8 ಸಮಾಧಾನವಾಗಿ ಮಲಗಿ ನಿದ್ರೆ ಮಾಡುವೆನು,

ಏಕೆಂದರೆ ಯೆಹೋವ ದೇವರೇ,

ನೀವೊಬ್ಬರೇ ನನ್ನನ್ನು ಸುರಕ್ಷಿತವಾಗಿ ವಾಸಿಸುವಂತೆ ಮಾಡುತ್ತೀರಿ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-