Publicidade

Salmos 38

ದಾವೀದನ ಕೀರ್ತನೆ. ದುರವಸ್ಥೆಯಲ್ಲಿರುವ ಭಕ್ತನ ದೇವರ ಸಹಾಯದ ಬೇಡಿಕೆ.

1 ಯೆಹೋವ ದೇವರೇ, ನೀವು ಬೇಸರದಿಂದ ನನ್ನನ್ನು ಗದರಿಸಬೇಡಿರಿ;

ಮನನೊಂದು ನನ್ನನ್ನು ಶಿಕ್ಷಿಸಬೇಡಿರಿ.

2 ಏಕೆಂದರೆ, ನಿಮ್ಮ ಬಾಣಗಳು ನನ್ನಲ್ಲಿ ನಾಟಿವೆ.

ನಿಮ್ಮ ಶಿಕ್ಷಾ ಹಸ್ತವು ನನ್ನ ಮೇಲೆ ಭಾರವಾಗಿದೆ.

3 ನಿಮ್ಮ ಬೇಸರದ ನಿಮಿತ್ತ ನನ್ನ ಶರೀರದಲ್ಲಿ ಸ್ವಸ್ಥತೆ ಏನೂ ಇಲ್ಲ;

ನನ್ನ ಪಾಪದ ನಿಮಿತ್ತ ನನ್ನ ಎಲುಬುಗಳಲ್ಲಿ ಕ್ಷೇಮವೇ ಇಲ್ಲ.

4 ಏಕೆಂದರೆ, ನನ್ನ ಅಕ್ರಮಗಳು ನನ್ನ ತಲೆಯ ಮೇಲೆ ಏರಿ ಹೋಗಿವೆ;

ದೋಷ ಭಾವನೆಯ ಹೊರೆಯು ನನಗೆ ಬಹುಭಾರವಾಗಿವೆ.

5 ನನ್ನ ಮೂರ್ಖತನದ ನಿಮಿತ್ತ ನನಗಾದ ಗಾಯಗಳು

ದುರ್ವಾಸನೆಯಿಂದ ಕೀವು ತುಂಬಿವೆ.

6 ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ.

ದಿನವೆಲ್ಲಾ ದುಃಖದಿಂದ ನಾನು ಅಲೆಯುತ್ತಿದ್ದೇನೆ.

7 ನನ್ನ ಸೊಂಟ ಬಹು ಬೇನೆಯಿಂದ ತುಂಬಿದೆ.

ನನ್ನ ದೇಹದಲ್ಲಿ ಕ್ಷೇಮವೇ ಇಲ್ಲ.

8 ಬಲಹೀನನಾಗಿದ್ದೇನೆ, ಬಹಳ ಜಜ್ಜಿ ಹೋಗಿದ್ದೇನೆ;

ನನ್ನ ಹೃದಯದ ವೇದನೆಯಿಂದ ನರಳುತ್ತಾ ಇದ್ದೇನೆ.

9 ಯೆಹೋವ ದೇವರೇ, ನಿಮಗೆ ನನ್ನ ಅಪೇಕ್ಷೆಗಳೆಲ್ಲಾ ಗೊತ್ತೇ ಇದೆ;

ನನ್ನ ನಿಟ್ಟುಸಿರು ನಿಮಗೆ ಮರೆಯಾದದ್ದಲ್ಲ.

10 ನನ್ನ ಹೃದಯ ಬಡಿದುಕೊಳ್ಳುತ್ತದೆ. ನನ್ನ ಶಕ್ತಿಯು ನನ್ನನ್ನು ಬಿಟ್ಟುಹೋಗಿದೆ;

ನನ್ನ ಕಣ್ಣುಗಳ ಬೆಳಕು ಸಹ ಹೋಗಿಬಿಟ್ಟಿದೆ.

11 ನನ್ನ ಪ್ರಿಯರೂ, ನನ್ನ ಸ್ನೇಹಿತರೂ ನನ್ನ ಬಾಧೆಗೆ ಓರೆಯಾಗಿ ನಿಲ್ಲುತ್ತಾರೆ;

ನನ್ನ ನೆರೆಯವರು ದೂರದಲ್ಲಿ ನಿಂತಿದ್ದಾರೆ.

12 ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ;

ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ;

ದಿನವೆಲ್ಲಾ ಮೋಸಗಳನ್ನು ಆಲೋಚಿಸುತ್ತಾರೆ.

13 ಆದರೆ ನಾನು ಕಿವುಡನ ಹಾಗೆ ಕೇಳಿಸಿಕೊಳ್ಳುವುದಿಲ್ಲ;

ತನ್ನ ಬಾಯಿ ತೆರೆಯದ ಮೂಕನ ಹಾಗಿದ್ದೇನೆ.

14 ನಾನು ಕಿವಿ ಕೇಳಿಸದವನಂತೆ ಇದ್ದೇನೆ.

ನಾನು ಪ್ರತ್ಯುತ್ತರ ಕೊಡಲಾರದಂತೆಯೂ ಇದ್ದೇನೆ.

15 ಯೆಹೋವ ದೇವರೇ, ನಿಮ್ಮನ್ನೇ ಎದುರು ನೋಡುತ್ತೇನೆ;

ನನ್ನ ದೇವರಾದ ಯೆಹೋವ ದೇವರೇ, ನೀವು ಉತ್ತರ ಕೊಡುವಿರಿ.

16 ಏಕೆಂದರೆ ನಾನು, "ಅವರು ನನಗೋಸ್ಕರ ಸಂತೋಷಪಡದೆ ಇರಲಿ

ನನ್ನ ಪಾದ ಜಾರುವಾಗ ಅವರು ನನಗೆ ವಿರೋಧವಾಗಿ

ತಮ್ಮನ್ನು ಹೆಚ್ಚಿಸಿಕೊಳ್ಳದಿರಲಿ," ಎಂದುಕೊಂಡೆನು.

17 ನಾನು ಎಡವಿ ಬೀಳಲಿದ್ದೇನೆ;

ನನ್ನ ನೋವು ಯಾವಾಗಲೂ ನನ್ನ ಮುಂದೆ ಇದೆ.

18 ನನ್ನ ಅಕ್ರಮವನ್ನು ಅರಿಕೆ ಮಾಡುವೆನು;

ನನ್ನ ಪಾಪಕ್ಕೋಸ್ಕರ ದುಃಖಪಡುವೆನು.

19 ನನ್ನ ಶತ್ರುಗಳು ಬಲಗೊಂಡಿದ್ದಾರೆ.

ನನ್ನನ್ನು ವಿನಾಕಾರಣವಾಗಿ ದ್ವೇಷಿಸುವವರು ಹೆಚ್ಚಿದ್ದಾರೆ.

20 ನನ್ನ ಶತ್ರುಗಳು ಒಳ್ಳೆಯದಕ್ಕೆ ಬದಲಾಗಿ

ಕೇಡನ್ನು ಸಲ್ಲಿಸುತ್ತಿದ್ದಾರೆ.

ನಾನು ಒಳ್ಳೆಯದನ್ನು ಹಿಂದಟ್ಟುವ ಕಾರಣ ನನ್ನನ್ನು ಎದುರಿಸುತ್ತಾರೆ.

21 ಯೆಹೋವ ದೇವರೇ, ನನ್ನನ್ನು ಬಿಡಬೇಡಿರಿ;

ನನ್ನ ದೇವರೇ, ನನಗೆ ದೂರವಾಗಿರಬೇಡಿರಿ.

22 ನನ್ನ ರಕ್ಷಕ ಆಗಿರುವ ಯೆಹೋವ ದೇವರೇ,

ನನ್ನ ಸಹಾಯಕ್ಕೆ ಬೇಗ ಬನ್ನಿರಿ.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-