Publicidade

Salmos 5

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೊಳಲು ವಾದ್ಯದೊಡನೆ ಹಾಡತಕ್ಕದ್ದು, ದಾವೀದನ ಕೀರ್ತನೆ.

1 ಯೆಹೋವ ದೇವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ,

ನನ್ನ ಪ್ರಲಾಪವನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.

2 ನನ್ನ ಅರಸರೇ, ನನ್ನ ದೇವರೇ,

ಸಹಾಯಕ್ಕಾಗಿರುವ ನನ್ನ ಮೊರೆಯನ್ನು ಕೇಳಿರಿ,

ನಿಮಗೇ ನಾನು ಪ್ರಾರ್ಥಿಸುತ್ತೇನೆ.

3 ಯೆಹೋವ ದೇವರೇ, ಉದಯಕಾಲದಲ್ಲಿ ನನ್ನ ಸ್ವರವನ್ನು ಕೇಳಿರಿ;

ಮುಂಜಾನೆಯಲ್ಲಿ ನಾನು ನನ್ನ ಬೇಡಿಕೆಗಳನ್ನು ನಿಮ್ಮ ಮುಂದೆ ಸಮರ್ಪಿಸಿ,

ಎದುರುನೋಡುತ್ತಾ ಕಾದುಕೊಂಡಿರುವೆನು.

4 ನೀವು ದುಷ್ಟತನವನ್ನು ಮೆಚ್ಚುವ ದೇವರಲ್ಲ;

ಕೆಡುಕರು ನಿಮ್ಮ ಬಳಿಯಲ್ಲಿ ವಾಸಿಸುವುದಿಲ್ಲ.

5 ನಿಮ್ಮ ಸನ್ನಿಧಿಯಲ್ಲಿ

ಗರ್ವಿಗಳು ನಿಂತುಕೊಳ್ಳಲಾರರು.

ಅಧರ್ಮ ಮಾಡುವವರೆಲ್ಲರನ್ನು ನೀವು ದ್ವೇಷಿಸುತ್ತೀರಿ.

6 ಸುಳ್ಳಾಡುವವರನ್ನು ನೀವು ದಂಡಿಸುತ್ತೀರಿ.

ಕೊಲೆಗಾರರನ್ನೂ ಮೋಸಗಾರರನ್ನೂ

ಯೆಹೋವ ದೇವರು ಅಸಹ್ಯಪಡುತ್ತಾರೆ.

7 ನಾನಾದರೋ, ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ

ನಿಮ್ಮ ಮನೆಗೆ ಬರುವೆನು;

ಭಕ್ತಿಭಾವದಿಂದ ನಿಮ್ಮ ಪರಿಶುದ್ಧ

ಆಲಯದ ಕಡೆಗೆ ತಲೆಬಾಗುವೆನು.

8 ಯೆಹೋವ ದೇವರೇ, ನನ್ನ ವಿರೋಧಿಗಳ ನಿಮಿತ್ತ

ನಿಮ್ಮ ನೀತಿಯಲ್ಲಿ ನನ್ನನ್ನು ನಡೆಸಿರಿ;

ನಿಮ್ಮ ಮಾರ್ಗವನ್ನು ನನ್ನ ಮುಂದೆ ನೇರವಾಗಿ ಮಾಡಿರಿ.

9 ಅವರ ಬಾಯಿಯಲ್ಲಿ ಯಥಾರ್ಥ ಮಾತು ಒಂದೂ ಇಲ್ಲ;

ಅವರ ಹೃದಯವು ನಾಶನದಿಂದ ತುಂಬಿದೆ.

ಅವರ ಗಂಟಲು ತೆರೆದ ಸಮಾಧಿಯೇ;

ತಮ್ಮ ನಾಲಿಗೆಯಿಂದ ಮುಖಸ್ತುತಿ ಮಾಡುತ್ತಾರೆ.

10 ಓ ದೇವರೇ! ಅವರನ್ನು ಅಪರಾಧಿಗಳೆಂದು ನಿರ್ಣಯಿಸಿರಿ,

ಅವರು ತಮ್ಮ ಸ್ವಂತ ಕುತಂತ್ರಗಳಿಂದ ಬಿದ್ದುಹೋಗಲಿ.

ಅವರ ಬಹು ಪಾಪಗಳ ನಿಮಿತ್ತ ಅವರನ್ನು ಬಹಿಷ್ಕರಿಸಿರಿ,

ಏಕೆಂದರೆ ಅವರು ನಿಮಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.

11 ಆದರೆ ನಿಮ್ಮನ್ನು ಆಶ್ರಯಿಸುವವರೆಲ್ಲರು ಆನಂದಿಸಲಿ;

ಅವರು ಸದಾ ನಿಮ್ಮ ಆನಂದ ಗಾನವನ್ನು ಹಾಡಲಿ.

ನಿಮ್ಮ ಹೆಸರನ್ನು ಪ್ರೀತಿಸುವವರು ನಿಮ್ಮಲ್ಲಿ ಆನಂದಿಸುವಂತೆ

ಅವರನ್ನು ನಿಮ್ಮ ಸಂರಕ್ಷಣೆಯಿಂದ ಆವರಿಸಿಕೊಳ್ಳಿರಿ.

12 ಯೆಹೋವ ದೇವರೇ, ನೀವು ನೀತಿವಂತರನ್ನು ನಿಶ್ಚಯವಾಗಿ ಆಶೀರ್ವದಿಸಿದ್ದೀರಿ;

ನೀವು ಅವರನ್ನು ನಿಮ್ಮ ಮೆಚ್ಚುಗೆಯಿಂದ ಗುರಾಣಿಯಂತೆಯೇ ಆವರಿಸಿಕೊಳ್ಳಿರಿ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-