Pular para o conteúdo
Publicidade

ಕೀರ್ತನೆಗಳು 115

1 ನಮಗಲ್ಲ ಯೆಹೋವ ದೇವರೇ, ನಮಗಲ್ಲ,

ನಿಮ್ಮ ಹೆಸರಿಗೆ ಮಾತ್ರ ಮಹಿಮೆ,

ನಿಮ್ಮ ಪ್ರೀತಿ ಮತ್ತು ಸತ್ಯತೆಯ ನಿಮಿತ್ತ ನಿಮಗೆ ಮಹಿಮೆಯಾಗಲಿ.

2 "ಅವರ ದೇವರು ಎಲ್ಲಿ?" ಎಂದು

ಜನಾಂಗಗಳು ಏಕೆ ಹೇಳಬೇಕು?

3 ನಮ್ಮ ದೇವರು ಪರಲೋಕದಲ್ಲಿದ್ದಾರೆ;

ಅವರು ಇಚ್ಛಿಸುವುದನ್ನೆಲ್ಲಾ ಮಾಡುತ್ತಾರೆ.

4 ಜನರ ವಿಗ್ರಹಗಳು ಬೆಳ್ಳಿ, ಬಂಗಾರದವುಗಳು,

ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.

5 ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ;

ಕಣ್ಣುಗಳಿವೆ, ಕಾಣುವುದಿಲ್ಲ.

6 ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ;

ಮೂಗು ಉಂಟು, ಮೂಸುವದಿಲ್ಲ.

7 ಕೈಗಳುಂಟು, ಮುಟ್ಟುವುದಿಲ್ಲ;

ಕಾಲುಗಳುಂಟು, ನಡೆಯುವುದಿಲ್ಲ;

ಅವರ ಗಂಟಲಿನಿಂದ ಧ್ವನಿ ಉಚ್ಚರಿಸಲು ಸಾಧ್ಯವಿಲ್ಲ.

8 ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ;

ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.

9 ಇಸ್ರಾಯೇಲರ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ;

ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.

10 ಆರೋನನ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ;

ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.

11 ಯೆಹೋವ ದೇವರಿಗೆ ಭಯಪಡುವವರೇ, ನೀವು ಯೆಹೋವ ದೇವರಲ್ಲಿಯೇ ಭರವಸೆ ಇಡಿರಿ;

ಅವರೇ ನಿಮ್ಮ ಸಹಾಯವೂ ಗುರಾಣಿಯೂ ಆಗಿದ್ದಾರೆ.

12 ಯೆಹೋವ ದೇವರು ನಮ್ಮನ್ನು ಜ್ಞಾಪಕ ಮಾಡಿಕೊಂಡಿದ್ದಾರೆ, ಅವರು ನಮ್ಮನ್ನು ಆಶೀರ್ವದಿಸುವರು;

ಇಸ್ರಾಯೇಲರ ಮನೆಯನ್ನು ಆಶೀರ್ವದಿಸುವರು;

ಆರೋನನ ಮನೆಯನ್ನು ಆಶೀರ್ವದಿಸುವರು.

13 ಯೆಹೋವ ದೇವರಿಗೆ ಭಯ ಪಡುವವರಾದ ಹಿರಿಯರನ್ನೂ

ಕಿರಿಯರನ್ನೂ ಬೇಧವಿಲ್ಲದೇ ಆಶೀರ್ವದಿಸುವರು.

14 ಯೆಹೋವ ದೇವರು ನಿಮ್ಮನ್ನು ಅಭಿವೃದ್ಧಿಪಡಿಸುವರು

ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವರು.

15 ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರಿಂದ

ನೀವು ಆಶೀರ್ವಾದ ಹೊಂದಿದವರು.

16 ಉನ್ನತ ಆಕಾಶಗಳು ಯೆಹೋವ ದೇವರದೇ,

ಆದರೆ ಅವರು ಭೂಮಿಯನ್ನು ಮಾನವರಿಗೆ ಕೊಟ್ಟಿದ್ದಾರೆ.

17 ಸತ್ತವರೂ ಮೌನಲೋಕವನ್ನು ಇಳಿದವರೆಲ್ಲರೂ

ಯೆಹೋವ ದೇವರನ್ನು ಸ್ತುತಿಸುವುದಿಲ್ಲ.

18 ಆದರೆ ನಾವು ಈಗಲೂ

ಯುಗಯುಗಕ್ಕೂ ಯೆಹೋವ ದೇವರನ್ನು ಸ್ತುತಿಸುವೆವು.

ಯೆಹೋವ ದೇವರನ್ನು ಸ್ತುತಿಸಿರಿ.

Estes versículos te tocaram? Ore agora!

+581 estão orando agora.

Junte-se à corrente de oração.