Publicidade

Salmos 16

ಮಿಕತಾಮ ಗೀತೆ. ದಾವೀದನ ಕೀರ್ತನೆ.

1 ನನ್ನ ದೇವರೇ, ನನ್ನನ್ನು ಕಾಪಾಡು,

ಏಕೆಂದರೆ ನಿಮ್ಮಲ್ಲಿ ಆಶ್ರಯಪಡೆದಿದ್ದೇನೆ.

2 ನಾನು ಯೆಹೋವ ದೇವರಿಗೆ, "ನೀವೇ ನನ್ನ ಕರ್ತ;

ನಿಮ್ಮನ್ನು ಬಿಟ್ಟು ನನಗಿಲ್ಲ ಒಳಿತು," ಎಂದು ಹೇಳಿದೆನು.

3 ಭೂಲೋಕದಲ್ಲಿರುವ ದೇವಜನರ ಕುರಿತು,

"ಇವರೇ ನನಗೆ ಶ್ರೇಷ್ಠರು. ಇವರಲ್ಲಿಯೇ ನನ್ನ ಎಲ್ಲಾ ಆನಂದವು," ಎಂದು ಹೇಳುವೆನು.

4 ಇತರ ದೇವರುಗಳನ್ನು ಅವಲಂಬಿಸಿರುವವರಿಗೆ ವ್ಯಥೆಗಳು ಹೆಚ್ಚೆಚ್ಚಾಗುವವು.

ಅವರಂತೆ ರಕ್ತ ಬಲಿಗಳನ್ನು ನಾನು ಅರ್ಪಿಸುವುದಿಲ್ಲ.

ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಉಚ್ಚರಿಸುವುದಿಲ್ಲ.

5 ಯೆಹೋವ ದೇವರೇ, ನೀವೇ ನನ್ನ ಪಾಲೂ, ನನ್ನ ಪಾತ್ರೆಯೂ ಆಗಿದ್ದೀರಿ;

ನನ್ನ ಸ್ವಾಸ್ತ್ಯವನ್ನು ಸುರಕ್ಷಿತವಾಗಿ ಇಡುವವರು ನೀವೇ.

6 ನನ್ನ ಪಾಲಿಗೆ ಬಂದ ಮೇರೆಯ ಸ್ಥಳವೂ ಸುಂದರವಾದದ್ದು;

ನಿಶ್ಚಯವಾಗಿಯೂ, ನನಗೆ ದೊರೆತ ಸ್ವತ್ತು ಆನಂದಕರವಾದದ್ದು.

7 ನನಗೆ ಸಮಾಲೋಚನೆ ನೀಡುತ್ತಿರುವ ಯೆಹೋವ ದೇವರನ್ನು ನಾನು ಸ್ತುತಿಸುತ್ತಿರುವೆನು;

ರಾತ್ರಿಯಲ್ಲಿಯೂ ನನ್ನ ಹೃದಯವು ನನಗೆ ಬೋಧಿಸುತ್ತದೆ.

8 ನಾನು ಯೆಹೋವ ದೇವರನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ.

ಅವರು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲೆನು.

9 ಆದ್ದರಿಂದ ನನ್ನ ಹೃದಯ ಹರ್ಷಿಸುವುದು, ನನ್ನ ನಾಲಿಗೆ ಉಲ್ಲಾಸಗೊಳ್ಳುವುದು;

ನನ್ನ ಶರೀರವು ಸಹ ಸುರಕ್ಷಿತವಾಗಿ ವಿಶ್ರಮಿಸುವುದು.

10 ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ;

ನಿಮ್ಮ ನಂಬಿಗಸ್ತನನ್ನು ಕೊಳೆಯುವ ಅವಸ್ಥೆಗೆ ತರುವುದಿಲ್ಲ.

11 ಜೀವಮಾರ್ಗವನ್ನು ನನಗೆ ತಿಳಿಯಪಡಿಸುವಿರಿ.

ನಿಮ್ಮ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷವಿದೆ;

ನಿಮ್ಮ ಬಲಗಡೆಯಲ್ಲಿ ನಿತ್ಯಾನಂದವೂ ಇರುತ್ತದೆ.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-