Pular para o conteúdo
Publicidade

ಕೀರ್ತನೆಗಳು 52

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ, ಮಸ್ಕೀಲ್ ರಾಗದಲ್ಲಿ ದಾವೀದನು ರಚಿಸಿದ ಪದ್ಯ.

1 ಬಲಿಷ್ಠನೇ, ನೀನು ಕೆಟ್ಟತನದಲ್ಲಿ ಹೆಚ್ಚಳ ಪಡುವುದೇಕೆ?

ದೇವರ ದೃಷ್ಟಿಯಲ್ಲಿ ಅಪಕೀರ್ತಿಯಾದವನೇ,

ದೇವರ ಅನಂತ ಕೃಪೆಯು ಯಾವಾಗಲೂ ಇರುವದು.

2 ಮೋಸ ಮಾಡುವವನೇ,

ಹದವಾದ ಕ್ಷೌರ ಕತ್ತಿಯ ಹಾಗೆ

ನಿನ್ನ ನಾಲಿಗೆಯು ಕೇಡನ್ನು ಕಲ್ಪಿಸುತ್ತದೆ.

3 ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ನೀನು ಪ್ರೀತಿಸುತ್ತಿ.

ಸತ್ಯವನಾಡುವುದಕ್ಕಿಂತ ಸುಳ್ಳನ್ನೇ ನೀನು ಮಾತನಾಡುತ್ತಿ.

4 ಮೋಸದ ನಾಲಿಗೆಯೇ,

ನಿನಗೆ ಹಾನಿಕರವಾದ ಮಾತುಗಳೇ ಇಷ್ಟ.

5 ಆದ್ದರಿಂದ ದೇವರು ನಿಶ್ಚಯವಾಗಿ ನಿನ್ನನ್ನು ನಿತ್ಯ ನಾಶಕ್ಕೆ ತರುವರು.

ದೇವರು ನಿನ್ನನ್ನು ನಿನ್ನ ವಾಸಸ್ಥಳದಿಂದ ಕಿತ್ತುಹಾಕುವರು.

ಜೀವಿತರ ದೇಶದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವರು.

6 ನೀತಿವಂತರು ಇದನ್ನು ಕಂಡು ಭಯಪಡುವರು.

ಅವರು ನಿನ್ನ ಬಗ್ಗೆ ನಗಾಡಿ ಹೀಗನ್ನುವರು,

7 "ಇಗೋ, ದೇವರನ್ನು ತನ್ನ ಬಲವನ್ನಾಗಿ ಮಾಡಿಕೊಳ್ಳದೆ,

ತನ್ನ ಅಧಿಕ ಐಶ್ವರ್ಯದಲ್ಲಿ ಭರವಸವಿಟ್ಟು

ತನ್ನ ಕೆಟ್ಟತನದಲ್ಲಿ ಬಲಗೊಂಡು ಇತರರನ್ನು ನಾಶಮಾಡಿದ

ಮನುಷ್ಯನು ಇವನೇ!"

8 ನಾನಾದರೋ ದೇವರ ಆಲಯದಲ್ಲಿರುವ

ಅಭಿವರ್ದಿಸುವ ಓಲಿವ್ ಮರದ ಹಾಗೆ ಇರುವೆನು.

ದೇವರ ಒಡಂಬಡಿಕೆಯ ಪ್ರೀತಿಯಲ್ಲಿ

ಯುಗಯುಗಾಂತರವೂ ಭರವಸವಿಟ್ಟಿರುವೆನು.

9 ದೇವರೇ ನಿಮ್ಮ ಉಪಕಾರಕ್ಕಾಗಿ ಯಾವಾಗಲೂ

ನಿಮ್ಮ ಭಕ್ತರ ಮುಂದೆ ನಿಮ್ಮನ್ನು ಸ್ತುತಿಸುತ್ತಿರುವೆನು.

ನಿಮ್ಮ ಹೆಸರು ಒಳ್ಳೆಯದು.

ಆದುದರಿಂದ ನಿಮ್ಮ ಹೆಸರನ್ನೇ ನಿರೀಕ್ಷಿಸಿಕೊಂಡಿರುವೆನು.

Estes versículos te tocaram? Ore agora!

+581 estão orando agora.

Junte-se à corrente de oração.