Publicidade

Salmos 29

ದಾವೀದನ ಕೀರ್ತನೆ.

1 ದೇವದೂತರೇ, ಬಲವು ಯೆಹೋವ ದೇವರದೇ,

ಮಹಿಮೆ ಯೆಹೋವ ದೇವರದೇ ಎಂದು ಹೇಳಿ ಕೊಂಡಾಡಿರಿ.

2 ಯೆಹೋವ ದೇವರ ನಾಮಕ್ಕೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ;

ಪರಿಶುದ್ಧತ್ವವೆಂಬ ವಸ್ತ್ರದೊಡನೆ ಯೆಹೋವ ದೇವರನ್ನು ಆರಾಧಿಸಿರಿ.

3 ಯೆಹೋವ ದೇವರ ಧ್ವನಿಯು ಜಲರಾಶಿಗಳ ಮೇಲೆ ಇದೆ;

ಮಹಿಮೆಯ ದೇವರು ಇದ್ದಾರೆ;

ಯೆಹೋವ ದೇವರು ಮಹಾಸಾಗರಗಳ ಮೇಲೆ ಇದ್ದಾರೆ.

4 ಯೆಹೋವ ದೇವರ ಧ್ವನಿಯು ಶಕ್ತಿಯುಳ್ಳದ್ದು;

ಯೆಹೋವ ದೇವರ ಧ್ವನಿಯು ವೈಭವವುಳ್ಳದ್ದು.

5 ಯೆಹೋವ ದೇವರ ಧ್ವನಿಯು ದೇವದಾರು ವೃಕ್ಷಗಳನ್ನು ಮುರಿಯುತ್ತದೆ;

ಯೆಹೋವ ದೇವರು ಲೆಬನೋನಿನ ದೇವದಾರು ವೃಕ್ಷಗಳನ್ನು ಮುರಿಯುತ್ತಾರೆ.

6 ಲೆಬನೋನ್ ಪರ್ವತವು ಕರುವಿನ ಹಾಗೆಯೂ

ಸಿರ್ಯೋನ್ ಬೆಟ್ಟವು ಎಳೆಯ ಕಾಡುಕೋಣದ ಹಾಗೆಯೂ ಹಾರಾಡುವಂತೆ ಮಾಡುತ್ತಾರೆ.

7 ಯೆಹೋವ ದೇವರ ಧ್ವನಿಯು

ಸಿಡಿಲಿನ ಮಿಂಚಿನಂತೆ ಅಪ್ಪಳಿಸುತ್ತದೆ.

8 ಯೆಹೋವ ದೇವರ ಶಬ್ದವು ಮರುಭೂಮಿಯನ್ನು ನಡುಗಿಸುತ್ತದೆ;

ಯೆಹೋವ ದೇವರು ಕಾದೇಶ್ ಮರುಭೂಮಿಯನ್ನು ನಡುಗಿಸುತ್ತಾರೆ.

9 ಯೆಹೋವ ದೇವರ ಧ್ವನಿಯು ಜಿಂಕೆಗಳು ಈಯುವಂತೆ ಮಾಡಿ

ಅಡವಿಗಳನ್ನು ಬಯಲು ಮಾಡುತ್ತದೆ;

ದೇವರ ಮಂದಿರದಲ್ಲಿ ಪ್ರತಿಯೊಬ್ಬರೂ "ಮಹಿಮೆ!" ಎಂದು ಘೋಷಿಸುತ್ತಾರೆ.

10 ಯೆಹೋವ ದೇವರು ಪ್ರಳಯದ ಮೇಲೆ ಕುಳಿತುಕೊಳ್ಳುತ್ತಾರೆ;

ಯುಗಯುಗಕ್ಕೂ ಯೆಹೋವ ದೇವರು ಅರಸರಾಗಿ ಕುಳಿತುಕೊಂಡಿದ್ದಾರೆ.

11 ಯೆಹೋವ ದೇವರು ತಮ್ಮ ಜನರಿಗೆ ಬಲವನ್ನು ಕೊಡುವರು;

ಯೆಹೋವ ದೇವರು ತಮ್ಮ ಜನರನ್ನು ಸಮಾಧಾನದಿಂದ ಆಶೀರ್ವದಿಸುವರು.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-