17 "ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಒಬ್ಬ ತಂದೆಯನ್ನಾಗಿ ನೇಮಿಸಿದ್ದೇನೆ,"4:17 ಆದಿ 17:5 ಎಂದು ಪವಿತ್ರ ವೇದದಲ್ಲಿ ಲಿಖಿತವಾಗಿದೆ. ದೇವರು ಸತ್ತವರಿಗೆ ಜೀವಕೊಡುವವರೂ ಇಲ್ಲದವುಗಳನ್ನು ಇರುವವುಗಳೋ ಎಂಬಂತೆ ಕರೆಯುವವರೂ ಆಗಿರುತ್ತಾರೆಂದು ಅಬ್ರಹಾಮನು ದೇವರ ಸನ್ನಿಧಿಯಲ್ಲಿ ನಂಬಿದನು.
18 ಅವನು ತನಗೆ ದೇವರಿಂದ ಹೇಳಲಾದ ನಿರೀಕ್ಷೆಗೆ ಯಾವ ಆಸ್ಪದವು ಇಲ್ಲದಿರುವಾಗಲೂ ನಿರೀಕ್ಷೆಯಿಂದ ನಂಬಿ, "ನಿನ್ನ ಸಂತಾನವು ನಕ್ಷತ್ರಗಳಷ್ಟು ಇರುವುದು,"4:18 ಆದಿ 15:5 ಎಂಬ ಹೇಳಿಕೆಯಂತೆ ಅವನು ಅನೇಕ ಜನಾಂಗಗಳಿಗೆ ತಂದೆಯಾದನು. 19 ಅವನು ಆಗಲೇ ಸುಮಾರು ನೂರು ವರ್ಷದವನಾಗಿದ್ದು, ತನ್ನ ದೇಹವು ದುರ್ಬಲವಾಗಿದ್ದರೂ ಹೆಂಡತಿಯಾದ ಸಾರಳಿಗೆ ಗರ್ಭಧರಿಸುವ ಕಾಲ ಮುಗಿದು ಹೋಗಿದ್ದರೂ ನಂಬಿಕೆಯಲ್ಲಿ ಬಲಹೀನನಾಗಲಿಲ್ಲ. 20 ಅವನು ದೇವರು ಮಾಡಿದ ವಾಗ್ದಾನಕ್ಕೆ ವಿರುದ್ಧ ಅಪನಂಬಿಕೆಯಿಂದ ಚಂಚಲಚಿತ್ತನಾಗದೆ, ನಂಬಿಕೆಯಿಂದ ಶಕ್ತಿವಂತನಾಗಿ ದೇವರಿಗೆ ಮಹಿಮೆಯನ್ನು ಸಲ್ಲಿಸಿದನು. 21 ಅವನು ವಾಗ್ದಾನವನ್ನು ನೆರವೇರಿಸಲು ದೇವರು ಶಕ್ತರಾಗಿದ್ದಾರೆಂದು ಪೂರ್ಣ ದೃಢತೆಯುಳ್ಳವನಾದನು.