Publicidade

Isaías 25

ನ್ಯಾಯತೀರ್ಪು ಮತ್ತು ರಕ್ಷಣೆಗಾಗಿ ಸ್ತುತಿ

1 ಯೆಹೋವನೇ, ನೀನೇ ನನ್ನ ದೇವರು; ನೀನು ಸತ್ಯ ಪ್ರಾಮಾಣಿಕತೆಗಳನ್ನು ಅನುಸರಿಸಿ,

ಆದಿ ಸಂಕಲ್ಪಗಳನ್ನು ನೆರವೇರಿಸುತ್ತಾ, ಅದ್ಭುತಗಳನ್ನು ನಡೆಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಪಡಿಸುವೆನು.

2 ಏಕೆಂದರೆ ನೀನು ದುರ್ಗವನ್ನು ನಾಶಪಡಿಸಿ, ಪಟ್ಟಣವನ್ನು ಹಾಳು ದಿಬ್ಬವನ್ನಾಗಿಯೂ,

ಅನ್ಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಲಾರದ ಹಾಳು ಊರನ್ನಾಗಿಯೂ ಮಾಡಿದ್ದಿ.

3 ಆದಕಾರಣ ಬಲಿಷ್ಠವಾದ ಜನಾಂಗವು ನಿನ್ನನ್ನು ಘನಪಡಿಸುವುದು, ಭಯಂಕರವಾದ ಜನರ ಪಟ್ಟಣವು ನಿನಗೆ ಅಂಜುವುದು.

4 ನೀನು ದೀನರಿಗೆ ಕೋಟೆಯು, ಇಕ್ಕಟ್ಟಿನಲ್ಲಿ ದಿಕಿಲ್ಲದವರಿಗೆ ರಕ್ಷಣಾದುರ್ಗವೂ,

ಬಿಸಿಲಿಗೆ ನೆರಳೂ, ಭೀಕರರ ಶ್ವಾಸವು

ಗೋಡೆಗೆ ಬಡಿದುಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ.

5 ಮೋಡಗಳು ಒಣನೆಲದ ಕಾವನ್ನು ತಂಪಾಗಿಸುವಂತೆ

ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ;

ಮೋಡದ ನೆರಳಿನಿಂದ ಬಿಸಿಲು ಹೇಗೆ ಕಡಿಮೆಯಾಗುವುದೋ ಹಾಗೆ ನಿನ್ನಿಂದ ಭೀಕರರ ಉತ್ಸಾಹ ಗಾನವು ಕ್ರಮೇಣ ನಿಂತುಹೋಗುವುದು.

6 ಇದಲ್ಲದೆ, ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲ ಜನಾಂಗಗಳಿಗೆ ಸಾರವತ್ತಾದ ಕೊಬ್ಬಿದ ಮೃಷ್ಟಾನ್ನದಿಂದಲೂ,

ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಸಿದ್ಧಮಾಡುವನು.

7 ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ,

ಸಕಲ ದೇಶದವರ ಮೇಲೆ ಹಾಕಿರುವ ತೆರೆಯನ್ನೂ ಇದೇ ಪರ್ವತದಲ್ಲಿ ತೆಗೆದುಹಾಕುವನು.

8 ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು;

ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರೆಸಿಬಿಡುವನು;

ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.

9 ಆ ದಿನದಲ್ಲಿ ಜನರು, "ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು,

ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು" ಎಂದು ಹೇಳಿಕೊಳ್ಳುವರು.

10 ಏಕೆಂದರೆ ಯೆಹೋವನ ಹಸ್ತವು ಈ ಪರ್ವತದಲ್ಲಿ ನೆಲೆಯಾಗಿರುವುದು;

ಮೋವಾಬ್ಯರೋ ತಿಪ್ಪೆಗುಂಡಿಯ ಕೆಸರಿನಲ್ಲಿ ಒಣಹುಲ್ಲು ತುಳಿಯಲ್ಪಡುವ ಹಾಗೆ ತಾವಿದ್ದಲ್ಲೇ ತುಳಿಯಲ್ಪಡುವರು.

11 ಈಜುವವನು ಕೈಯಾಡಿಸುವಂತೆ ಅವರು ಅದರಲ್ಲಿಯೇ ಕೈಯಾಡಿಸುವರು; ಆದರೆ ಯೆಹೋವನು ಅವರ ಗರ್ವವನ್ನೂ, ಕೈಯ ಚಮತ್ಕಾರವನ್ನೂ ತಗ್ಗಿಸಿಬಿಡುವನು.

12 ದುರ್ಗಮವಾಗಿಯೂ, ಎತ್ತರವಾಗಿಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ, ತಗ್ಗಿಸಿ, ನೆಲ ಸಮಮಾಡಿ ಧೂಳಿಗೆ ತರುವನು.

Veja também

Publicidade
Bíblia Online Bíblia Online

Bíblia Online • Versão: 2026-06-22_10-02-25-