Pular para o conteúdo
Publicidade

ಯೆಶಾಯನು 35

ಇಸ್ರಾಯೇಲಿನ ಮುಂದಿನ ಸೌಭಾಗ್ಯ

1 ಅರಣ್ಯವೂ, ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ

ತಾವರೆಯಂತೆ ಕಳಕಳಿಸುವುದು.

2 ಅದು ಸಮೃದ್ಧಿಯಾಗಿ ಹೂಬಿಟ್ಟು, ಉತ್ಸಾಹ ಧ್ವನಿಮಾಡುವಷ್ಟು ಉಲ್ಲಾಸಿಸುವುದು. ಲೆಬನೋನಿನ ಮಹಿಮೆಯೂ,

ಕರ್ಮೆಲಿನ ಮತ್ತು ಶಾರೋನಿನ ವೈಭವವೂ ಅದಕ್ಕೆ ದೊರೆಯುವವು;

ಇವೆಲ್ಲಾ ಯೆಹೋವನ ಮಹಿಮೆಯನ್ನೂ, ನಮ್ಮ ದೇವರ ವೈಭವವನ್ನೂ ಕಾಣುವವು.

3 ಜೋಲುಬಿದ್ದ ಕೈಗಳನ್ನೂ, ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ.

4 ಭಯಭ್ರಾಂತ ಹೃದಯದವರಿಗೆ, "ಬಲಗೊಳ್ಳಿರಿ, ಹೆದರಬೇಡಿರಿ!

ಇಗೋ, ನಿಮ್ಮ ದೇವರು ಮುಯ್ಯಿತೀರಿಸುವುದಕ್ಕೂ,

ದೈವಿಕ ಪ್ರತಿಫಲವನ್ನು ಕೊಡುವುದಕ್ಕೂ ಬರುವನು. ತಾನೇ ಬಂದು ನಿಮ್ಮನ್ನು ರಕ್ಷಿಸುವನು" ಎಂದು ಹೇಳಿರಿ.

5 ಆಗ ಕುರುಡರ ಕಣ್ಣು ಕಾಣುವುದು, ಕಿವುಡರ ಕಿವಿ ಕೇಳುವುದು.

6 ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವುದು,

ಅರಣ್ಯದಲ್ಲಿ ಒರತೆಗಳು ಒಡೆಯುವವು, ಮರುಭೂಮಿಯಲ್ಲಿ ನದಿಗಳು ಹುಟ್ಟಿ ಹರಿಯುವವು.

7 ಬೆಂಗಾಡು ಸರೋವರವಾಗುವುದು, ಒಣನೆಲದಲ್ಲಿ ಬುಗ್ಗೆಗಳು ಹರಿಯುವವು;

ನರಿಗಳು ಮಲಗುತ್ತಿದ್ದ ಸ್ಥಳವು ಆಪುಜಂಬುಗಳ ಪ್ರದೇಶವಾಗುವುದು.

8 ಅಲ್ಲಿ ರಾಜಮಾರ್ಗವಿರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು.

ಯಾವ ಅಶುದ್ಧನೂ ಅದರ ಮೇಲೆ ಹಾದುಹೋಗನು. ಆದರೆ ಅದು ದೇವಜನರಿಗಾಗಿಯೇ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿತಪ್ಪನು.

9 ಸಿಂಹವು ಅಲ್ಲಿ ಇರದು. ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗುವುದಿಲ್ಲ. ಅದು ಅಲ್ಲಿ ಕಾಣುವುದೇ ಇಲ್ಲ.

ಬಿಡುಗಡೆಯಾದವರೇ ಅಲ್ಲಿ ನಡೆಯುವರು.

10 ಯೆಹೋವನು ವಿಮೋಚಿಸಿದವರು ಹಿಂದಿರುಗಿ,

ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು.

ಅವರು ಹರ್ಷಾನಂದಗಳನ್ನು ಅನುಭವಿಸುವರು, ದುಃಖವೂ, ನಿಟ್ಟುಸಿರೂ ಓಡಿಹೋಗುವವು.

Estes versículos te tocaram? Ore agora!

+581 estão orando agora.

Junte-se à corrente de oração.