Publicidade

Provérbios 10

1 ಸೊಲೊಮೋನನ ಜ್ಞಾನೋಕ್ತಿಗಳು:

ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನು ಉಂಟುಮಾಡುತ್ತಾನೆ.

ಅಜ್ಞಾನಿಯಾದ ಮಗನಾದರೋ ತನ್ನ ತಾಯಿಗೆ ಶೋಕವನ್ನುಂಟು ಮಾಡುತ್ತಾನೆ.

2 ಅನ್ಯಾಯದ ಸಂಪತ್ತುಗಳು ಶಾಶ್ವತವಲ್ಲ,

ಆದರೆ ನೀತಿಯು ಮರಣದಿಂದ ಬಿಡಿಸುತ್ತದೆ.

3 ನೀತಿವಂತನನ್ನು ಹಸಿವೆಯಿಂದ ಬಳಲುವಂತೆ ಯೆಹೋವ ದೇವರು ಬಿಡುವುದಿಲ್ಲ;

ಆದರೆ ದುಷ್ಟರ ಆಶೆಯನ್ನು ಅವರು ಭಂಗಪಡಿಸುತ್ತಾರೆ.

4 ಆಲಸ್ಯದ ಕೈ ದರಿದ್ರನನ್ನಾಗಿ ಮಾಡುವದು;

ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ.

5 ಬೇಸಿಗೆಯಲ್ಲಿ ಫಸಲನ್ನು ಕೂಡಿಸುವವರು ಬುದ್ಧಿವಂತ ಮಕ್ಕಳು,

ಸುಗ್ಗಿಯಲ್ಲಿ ನಿದ್ರೆ ಮಾಡುವವರು ನಾಚಿಕೆಗೆಟ್ಟ ಮಕ್ಕಳು.

6 ನೀತಿವಂತರ ತಲೆಯ ಮೇಲೆ ಆಶೀರ್ವಾದವಿದೆ;

ಆದರೆ ದುಷ್ಟರ ಬಾಯಲ್ಲಿ ಕ್ರೌರ್ಯ ಅಡಗಿದೆ.

7 ನೀತಿವಂತರ ಸ್ಮರಣೆಯು ಆಶೀರ್ವಾದಕ್ಕೆ ಆಸ್ಪದ;

ಆದರೆ ದುಷ್ಟನ ಹೆಸರು ಕೊಳೆಯುವುದು.

8 ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು;

ಆದರೆ ಹರಟೆಯ ಮೂರ್ಖನು ಬೀಳುವನು.

9 ಯಥಾರ್ಥ ನಡತೆಯವರು ಸುರಕ್ಷಿತವಾಗಿ ಜೀವಿಸುತ್ತಾರೆ;

ಆದರೆ ವಕ್ರಮಾರ್ಗಗಳಲ್ಲಿ ನಡೆಯುವವನು ಬಯಲಿಗೆ ಬರುವನು.

10 ದುರುದ್ದೇಶದಿಂದ ಕಣ್ಣು ಮಿಟಕಿಸುವವನು ದುಃಖವನ್ನು ಉಂಟುಮಾಡುತ್ತಾನೆ,

ಆದರೆ ಹರಟೆಯ ಮೂರ್ಖನು ಬೀಳುವನು.

11 ನೀತಿವಂತನ ಬಾಯಿಯು ಜೀವದ ಬುಗ್ಗೆ;

ಆದರೆ ದುಷ್ಟನ ಬಾಯಿ ಹಿಂಸೆಯನ್ನು ಮರೆಮಾಡುತ್ತದೆ.

12 ದ್ವೇಷವು ಜಗಳಗಳನ್ನು ಎಬ್ಬಿಸುತ್ತದೆ;

ಆದರೆ ಪ್ರೀತಿಯು ಎಲ್ಲಾ ಪಾಪಗಳನ್ನು ಮುಚ್ಚುತ್ತದೆ.

13 ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕುತ್ತದೆ;

ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ.

14 ಜ್ಞಾನಿಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ;

ಆದರೆ ಮೂರ್ಖನ ಬಾಯಿ ವಿನಾಶವನ್ನು ಆಹ್ವಾನಿಸುತ್ತದೆ.

15 ಐಶ್ವರ್ಯವಂತರಿಗೆ ಸಂಪತ್ತೇ ಅವರ ಬಲವಾದ ಕೋಟೆ;

ಆದರೆ, ಬಡತನವೇ ಬಡವರ ನಾಶನಕ್ಕೆ ಕಾರಣ.

16 ನೀತಿವಂತರ ದುಡಿತವು ಜೀವವಾಗುವುದು;

ಆದರೆ, ದುಷ್ಟರ ಆದಾಯವು ಪಾಪ ಹಾಗು ಮರಣ.

17 ಶಿಸ್ತನ್ನು ಕೈಗೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು;

ಆದರೆ ತಿದ್ದುಪಾಟನ್ನು ತಿರಸ್ಕರಿಸುವವನು ಇತರರ ದಾರಿತಪ್ಪಿಸುವನು.

18 ದ್ವೇಷವನ್ನು ಮರೆಮಾಚುವವನು ಸುಳ್ಳುಗಾರ

ಮತ್ತು ಚಾಡಿ ಹೇಳುವವನು ಮೂರ್ಖನು.

19 ಅತಿಯಾದ ಮಾತುಗಳಿಂದ ಪಾಪವು ಕೊನೆಗೊಳ್ಳುವುದಿಲ್ಲ.

ಆದರೆ ಜ್ಞಾನವಂತನು ತನ್ನ ನಾಲಿಗೆಯನ್ನು ತಡೆಯುವನು.

20 ನೀತಿವಂತರ ನಾಲಿಗೆಯು ಚೊಕ್ಕಬೆಳ್ಳಿಯಂತಿದೆ;

ದುಷ್ಟರ ಹೃದಯವು ಬೆಲೆಯಿಲ್ಲದ್ದು.

21 ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ,

ಜ್ಞಾನದ ಕೊರತೆಯಿಂದ ಬುದ್ಧಿಹೀನರು ಸಾಯುತ್ತಾರೆ.

22 ಯೆಹೋವ ದೇವರ ಆಶೀರ್ವಾದವು ಸಂಪತ್ತನ್ನು ಉಂಟುಮಾಡುವುದು;

ಅವರು ಅದರೊಂದಿಗೆ ಯಾವ ದುಃಖವನ್ನೂ ಸೇರಿಸುವುದಿಲ್ಲ.

23 ಮೂರ್ಖನಿಗೆ ಕೇಡು ಮಾಡುವುದರಲ್ಲಿ ಆನಂದ;

ಆದರೆ ತಿಳುವಳಿಕೆಯ ವ್ಯಕ್ತಿಯು ಜ್ಞಾನದಲ್ಲಿ ಸಂತೋಷಪಡುತ್ತಾನೆ.

24 ದುಷ್ಟನ ಭೀತಿಯೇ ಅವನನ್ನು ಹಿಂದಿಕ್ಕುವುದು;

ಆದರೆ ನೀತಿವಂತರ ಇಷ್ಟವು ಸಫಲವಾಗುವುದು.

25 ಬಿರುಗಾಳಿಯು ಬೀಸಿದರೆ, ದುಷ್ಟರು ಇಲ್ಲವಾಗುವರು;

ಆದರೆ ನೀತಿವಂತರು ಶಾಶ್ವತವಾಗಿ ನಿಲ್ಲುವರು.

26 ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ,

ಯಜಮಾನನಿಗೆ ಸೋಮಾರಿಯು ಹಾಗೆಯೇ ಇರುವನು.

27 ಯೆಹೋವ ದೇವರ ಭಯವು ಜೀವನದ ದಿನಗಳನ್ನು ಹೆಚ್ಚಿಸುತ್ತದೆ;

ದುಷ್ಟರ ವರ್ಷಗಳು ಕಡಿಮೆ ಆಗುವವು.

28 ನೀತಿವಂತರ ನಿರೀಕ್ಷೆಯು ಆನಂದಕರವಾಗಿರುವುದು;

ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವುದು.

29 ಯೆಹೋವ ದೇವರ ಮಾರ್ಗವು ನಿರ್ದೋಷಿಗಳಿಗೆ ಆಶ್ರಯವಾಗಿದೆ;

ಆದರೆ ಕೇಡು ಮಾಡುವವರಿಗೆ ಅದು ವಿನಾಶಕರವಾಗಿದೆ.

30 ನೀತಿವಂತರು ಎಂದಿಗೂ ಕದಲುವುದೇ ಇಲ್ಲ;

ಆದರೆ ದುಷ್ಟರು ಭೂಮಿಯಲ್ಲಿ ನಿಲ್ಲುವುದಿಲ್ಲ.

31 ನೀತಿವಂತರ ಬಾಯಲ್ಲಿ ಜ್ಞಾನವು ಫಲಿಸುತ್ತದೆ;

ಆದರೆ ಮೂರ್ಖನ ನಾಲಿಗೆಯು ಕತ್ತರಿಸಲಾಗುವುದು.

32 ಯೋಗ್ಯವಾದದ್ದು ಯಾವುದೆಂದು ನೀತಿವಂತರ ತುಟಿಗಳಿಗೆ ತಿಳಿಯುವುದು,

ಆದರೆ, ದುಷ್ಟರ ಬಾಯಿ ಮೂರ್ಖತನವನ್ನೇ ಹೊರಗೆಡವುದು.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-