Publicidade

Provérbios 13

1 ಜ್ಞಾನಿಯಾದ ಮಗನು ತನ್ನ ತಂದೆಯ ಉಪದೇಶವನ್ನು ಸ್ವೀಕರಿಸುತ್ತಾನೆ;

ಆದರೆ ಅಪಹಾಸ್ಯ ಮಾಡುವವನು ಗದರಿಕೆಯನ್ನು ಕೇಳುವುದಿಲ್ಲ.

2 ತನ್ನ ಬಾಯಿಯ ಫಲದಿಂದ ಒಬ್ಬ ಮನುಷ್ಯನು ಶ್ರೇಷ್ಠವಾದದ್ದನ್ನು ಆನಂದಿಸುತ್ತಾನೆ,

ಆದರೆ ವಿಶ್ವಾಸದ್ರೋಹಿಗಳಿಗೆ ಹಿಂಸೆಯ ಹಸಿವು ಇರುತ್ತದೆ.

3 ತನ್ನ ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ;

ತನ್ನ ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.

4 ಸೋಮಾರಿಯ ಹಸಿವು ಎಂದಿಗೂ ತುಂಬುವುದಿಲ್ಲ;

ಆದರೆ ಶ್ರಮಪಡುವವರ ಆಸೆಗಳು ಸಂಪೂರ್ಣವಾಗಿ ಈಡೇರುವವು.

5 ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ,

ಆದರೆ ದುಷ್ಟರು ತಮ್ಮನ್ನು ತಾವೇ ದುರ್ವಾಸನೆಗೊಳಪಡಿಸಿಕೊಳ್ಳುತ್ತಾರೆ

ಮತ್ತು ತಮ್ಮ ಮೇಲೆ ಅವಮಾನವನ್ನು ತಂದುಕೊಳ್ಳುತ್ತಾರೆ.

6 ನೀತಿಯು ಯಥಾರ್ಥವಂತನನ್ನು ಕಾಪಾಡುತ್ತದೆ;

ಆದರೆ ದುಷ್ಟತನವು ಪಾಪಿಯನ್ನು ಕೆಡವುತ್ತದೆ.

7 ಬಡವನಾಗಿದ್ದರೂ ಐಶ್ವರ್ಯವಂತನಾಗಿ ನಟಿಸುವವನು ಇದ್ದಾನೆ;

ಮತ್ತೊಬ್ಬನು ದರಿದ್ರನಾಗಿ ಕಾಣಿಸಿದರೂ ಬಹು ಸಿರಿವಂತನೇ.

8 ಐಶ್ವರ್ಯವಂತನ ಪ್ರಾಣದ ವಿಮೋಚನೆಯು ಅವನ ಐಶ್ವರ್ಯದಿಂದಲೇ;

ಆದರೆ ಬಡವನು ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.

9 ನೀತಿವಂತರ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತದೆ;

ದುಷ್ಟರ ದೀಪವು ಆರಿಹೋಗುವುದು.

10 ಎಲ್ಲಿ ಗರ್ವವೋ ಅಲ್ಲಿ ಕಲಹ;

ಆದರೆ ಒಳ್ಳೆಯ ಸಲಹೆಯನ್ನು ತೆಗೆದುಕೊಳ್ಳುವವರಲ್ಲಿ ಜ್ಞಾನವು ಕಂಡುಬರುತ್ತದೆ.

11 ಅಪ್ರಾಮಾಣಿಕವಾಗಿ ಹೊಂದಿದ ಸಂಪತ್ತು ಕ್ಷಯಿಸುವುದು;

ಪ್ರಯಾಸದಿಂದ ಕೂಡಿಸಿದ ಸಂಪತ್ತು ವೃದ್ಧಿಗೊಳ್ಳುವುದು.

12 ನಿರೀಕ್ಷೆ ತಡವಾದರೆ ಹೃದಯವು ಅಸ್ವಸ್ಥಗೊಳ್ಳುತ್ತದೆ;

ಆಶೆಯು ಈಡೇರಿದರೆ, ಅದು ಜೀವಕರವಾದ ವೃಕ್ಷವು.

13 ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು;

ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು.

14 ಮರಣದ ಪಾಶಗಳಿಂದ ತಪ್ಪಿಸಿಕೊಳ್ಳುವುದಕ್ಕೆ

ಜ್ಞಾನವಂತರ ಉಪದೇಶವು ಜೀವದ ಬುಗ್ಗೆಯಾಗಿದೆ.

15 ಒಳ್ಳೆಯ ಪ್ರಜ್ಞೆ ಇರುವ ವ್ಯಕ್ತಿಯನ್ನು ಗೌರವಿಸಲಾಗುತ್ತದೆ;

ಆದರೆ ವಿಶ್ವಾಸದ್ರೋಹಿಯ ಮಾರ್ಗವು ನಾಶಕರವಾಗಿದೆ.

16 ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ;

ಆದರೆ ಮೂರ್ಖನು ತನ್ನ ಮೂರ್ಖತ್ವವನ್ನು ಹೊರಗೆಡವುತ್ತಾನೆ.

17 ದುಷ್ಟ ದೂತನು ಕೇಡಿಗೆ ಬೀಳುತ್ತಾನೆ;

ಆದರೆ ನಂಬಿಗಸ್ತನಾದ ರಾಯಭಾರಿಯು ಆರೋಗ್ಯದಾಯಕನು.

18 ಬೋಧನೆಯನ್ನು ಕಡೆಗಣಿಸುವವನಿಗೆ ಬಡತನವೂ, ಅವಮಾನವೂ ಬರುವುವು;

ಗದರಿಕೆಯನ್ನು ಗಮನಿಸುವವನು ಸನ್ಮಾನ ಹೊಂದುವನು.

19 ಕನಸುಗಳು ನನಸಾಗುವುದನ್ನು ನೋಡುವುದು ಆಹ್ಲಾದಕರವಾಗಿರುತ್ತದೆ;

ಕೆಟ್ಟತನದಿಂದ ತಿರುಗುವುದು ಮೂರ್ಖರಿಗೆ ಅಸಹ್ಯವಾಗಿದೆ.

20 ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗುವನು;

ಆದರೆ ಮೂರ್ಖರ ಜೊತೆಗಾರನು ಸಂಕಟಪಡುವನು.

21 ವಿಪತ್ತು ಪಾಪಿಗಳನ್ನು ಹಿಂಬಾಲಿಸುತ್ತದೆ;

ಆದರೆ ನೀತಿವಂತರಿಗೆ ಒಳ್ಳೆಯದು ಪ್ರತಿಫಲವಾಗುವುದು.

22 ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಟ್ಟುಬಿಡುವನು;

ಆದರೆ ಪಾಪಿಯ ಸಂಪತ್ತು ನೀತಿವಂತರಿಗಾಗಿ ಸಂಗ್ರಹವಾಗಿದೆ.

23 ಬಡವರಿಗೆ ಜವುಳು ಭೂಮಿಯಲ್ಲಿಯೂ ಬಹು ಬೆಳೆಯು ಸಿಕ್ಕುತ್ತದೆ;

ಅನ್ಯಾಯವು ಅದನ್ನು ಹಾರಿಸಿಬಿಡುವುದು.

24 ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆಮಾಡುತ್ತಾನೆ;

ಆದರೆ ತಮ್ಮ ಮಕ್ಕಳನ್ನು ಪ್ರೀತಿಸುವವನು ಅವರನ್ನು ಶಿಸ್ತು ಮಾಡಲು ಜಾಗರೂಕರಾಗಿರುತ್ತಾನೆ.

25 ನೀತಿವಂತನು ತನ್ನ ಪ್ರಾಣವು ತೃಪ್ತಿಯಾಗುವವರೆಗೆ ತಿನ್ನುತ್ತಾನೆ;

ದುಷ್ಟರ ಹೊಟ್ಟೆಗೆ ಕೊರತೆಯಾಗುವುದು.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-