Publicidade

Provérbios 18

1 ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ

ಸಮಸ್ತ ಸುಜ್ಞಾನಕ್ಕೂ ರೇಗುವನು.

2 ವಿವೇಕದಲ್ಲಿ ಬುದ್ಧಿಹೀನನಿಗೆ ಸಂತೋಷವಿಲ್ಲ;

ಆದರೆ ತನ್ನ ಹೃದಯವನ್ನು ಹೊರಪಡಿಸಿಕೊಳ್ಳುವುದೇ ಅವನಿಗೆ ಸಂತೋಷ.

3 ದುಷ್ಟತ್ವವು ಬಂದಾಗ ತಾತ್ಸಾರವೂ,

ಅವಮಾನದೊಂದಿಗೆ ನಿಂದೆಯೂ ಬರುತ್ತವೆ.

4 ಮನುಷ್ಯನ ಬಾಯಿಯ ಮಾತುಗಳು ಆಳವಾದ ನೀರಿನಂತೆಯೂ,

ಜ್ಞಾನದ ಬುಗ್ಗೆಯು ಹರಿಯುವ ತೊರೆಯಂತೆಯೂ ಇವೆ.

5 ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ,

ದುಷ್ಟರಿಗೆ ಪಕ್ಷಪಾತ ತೋರಿಸುವುದು ಯುಕ್ತವಲ್ಲ.

6 ಜ್ಞಾನಹೀನನ ತುಟಿಗಳು ಕಲಹದಲ್ಲಿ ಸೇರುವುದರಿಂದ

ಏಟುಗಳನ್ನು ತಿನ್ನುವುದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ.

7 ಬುದ್ಧಿಹೀನನ ಬಾಯಿಯು ಅವನ ನಾಶನ;

ಅವನ ತುಟಿಗಳು ಅವನ ಪ್ರಾಣಕ್ಕೆ ಪಾಶ.

8 ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು;

ಅವು ಹೊಟ್ಟೆಯ ಒಳಭಾಗಗಳಿಗೆ ಇಳಿದು ಹೋಗುವುವು.

9 ತನ್ನ ಕೆಲಸದಲ್ಲಿ ಸೋಮಾರಿಯಾಗಿರುವವನು,

ಕೆಡುಕನಿಗೆ ಸಹೋದರನಾಗಿದ್ದಾನೆ.

10 ಯೆಹೋವ ದೇವರ ನಾಮವು ಬಲವಾದ ಬುರುಜು;

ನೀತಿವಂತನು ಅದರೊಳಕ್ಕೆ ಓಡಿ ಭದ್ರವಾಗಿರುತ್ತಾನೆ.

11 ಧನವಂತರ ಸಂಪತ್ತು ಅವರಿಗೆ ಬಲವಾದ ಪಟ್ಟಣವೂ

ಅವನ ಕಲ್ಪನೆಯಲ್ಲಿ ಅದು ಸುರಕ್ಷತೆಯ ಎತ್ತರವಾದ ಗೋಡೆಯೂ ಆಗಿದೆ.

12 ನಾಶನಕ್ಕೆ ಮುಂಚೆ ಮನುಷ್ಯನ ಹೃದಯವು ಗರ್ವಿಷ್ಠವಾಗಿರುವುದು;

ಸನ್ಮಾನಕ್ಕೆ ಮುಂಚೆ ದೀನತ್ವವು ಬರುತ್ತದೆ.

13 ಕೇಳಿಸಿಕೊಳ್ಳದೆ ಉತ್ತರ ಕೊಡುವವರಿಗೆ

ಅದು ಮೂರ್ಖತನವೂ, ಅವಮಾನವೂ ಆಗಿದೆ.

14 ಮನುಷ್ಯನ ಆತ್ಮವು ಅಸ್ವಸ್ಥತೆಯನ್ನು ಸಹಿಸುವುದು;

ಆದರೆ ಮುರಿದ ಆತ್ಮವನ್ನು ಸಹಿಸುವವರು ಯಾರು?

15 ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ;

ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ.

16 ಕಾಣಿಕೆಯನ್ನು ಕೊಡುವವನಿಗೆ ಬಾಗಿಲು ತೆರೆಯುತ್ತದೆ;

ಅದು ದೊಡ್ಡವರ ಸನ್ನಿಧಾನಕ್ಕೂ ಅವನನ್ನು ಕರೆದುಕೊಂಡು ಹೋಗುತ್ತದೆ.

17 ಪ್ರತಿವಾದಿ ಬಂದು ಪರಿಶೀಲಿಸುವವರೆಗೆ,

ಮೊದಲು ವಾದಿಸುವವನು ನ್ಯಾಯವಂತನೆಂದು ತೋರುತ್ತಾನೆ.

18 ಚೀಟು ಹಾಕುವುದರಿಂದ ವ್ಯಾಜ್ಯಶಮನ;

ಬಲಿಷ್ಠ ಪ್ರತಿವಾದಿಗಳ ವಿವಾದಗಳನ್ನು ಸಹ ಬಗೆಹರಿಸುತ್ತದೆ.

19 ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ ಬೇಸರಗೊಂಡ ಸಹೋದರನನ್ನು ಗೆಲ್ಲುವುದು ಕಷ್ಟಕರ;

ಅವರ ಕಲಹಗಳು ಕೋಟೆಯ ಬಾಗಿಲಿಗೆ ಅಗುಳಿಗಳಂತೆ ಇವೆ.

20 ತನ್ನ ಬಾಯಿಯ ಫಲದಿಂದ ಮನುಷ್ಯನ ಹೊಟ್ಟೆಯು ತೃಪ್ತಿ ಹೊಂದುವುದು;

ತನ್ನ ತುಟಿಗಳ ಆದಾಯದಿಂದ ಅವನು ತೃಪ್ತಿಹೊಂದುವನು.

21 ನಾಲಿಗೆಗೆ ಮರಣ ಮತ್ತು ಜೀವದ ಶಕ್ತಿಯಿದೆ;

ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು.

22 ಪತ್ನಿಯನ್ನು ದೊರಕಿಸಿಕೊಂಡವನು ಒಳ್ಳೆಯದನ್ನು ಸಂಪಾದಿಸಿದವನಾಗಿ,

ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ.

23 ಬಡವನು ಕರುಣೆಗಾಗಿ ವಿಜ್ಞಾಪನೆ ಮಾಡುತ್ತಾನೆ;

ಆದರೆ ಧನಿಕನು ಕಠಿಣವಾಗಿ ಉತ್ತರ ಕೊಡುತ್ತಾರೆ.

24 ವಿಶ್ವಾಸಕ್ಕೆ ಅರ್ಹರಲ್ಲದ ಸ್ನೇಹಿತರನ್ನು ಹೊಂದಿರುವವನು ಶೀಘ್ರವೇ ನಾಶವಾಗುತ್ತಾನೆ;

ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-