13 ಒಂದು ದಿನ ಯೋಬನ ಪುತ್ರಪುತ್ರಿಯರು ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ದ್ರಾಕ್ಷಾರಸವನ್ನು ಕುಡಿಯುತ್ತಾ ಔತಣಮಾಡುತ್ತಿದ್ದರು. 14 ಒಬ್ಬ ದೂತನು ಯೋಬನ ಬಳಿಗೆ ಬಂದು, "ಎತ್ತುಗಳು ಉಳುಮೆ ಮಾಡುತ್ತಾ ಇದ್ದವು. ಹೆಣ್ಣು ಕತ್ತೆಗಳು ಹತ್ತಿರದಲ್ಲೆ ಮೇಯುತ್ತಾ ಇದ್ದವು. 15 ಶೆಬದವರು ಅವುಗಳ ಮೇಲೆ ದಾಳಿಮಾಡಿ, ಅವುಗಳನ್ನು ತೆಗೆದುಕೊಂಡು ಹೋದರು. ಸೇವಕರನ್ನು ಸಹ ಖಡ್ಗದಿಂದ ಸಂಹರಿಸಿದರು. ನಾನೊಬ್ಬನು ಮಾತ್ರ ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ," ಎಂದನು.
16 ಅವನು ಇನ್ನೂ ಮಾತನಾಡುತ್ತಿರಲು ಮತ್ತೊಬ್ಬ ದೂತನು ಬಂದು, "ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿಗಳನ್ನೂ ಸೇವಕರನ್ನೂ ಸುಟ್ಟುಹಾಕಿತು. ನಾನೊಬ್ಬನು ಮಾತ್ರ ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ," ಎಂದನು.
17 ಇವನು ಇನ್ನೂ ಮಾತನಾಡುತ್ತಿರಲು, ಇನ್ನೊಬ್ಬ ದೂತನು ಬಂದು, "ಕಸ್ದೀಯರು ಮೂರು ಗುಂಪುಗಳಾಗಿ ಬಂದು, ಒಂಟೆಗಳ ಮೇಲೆ ದಾಳಿಮಾಡಿ, ಅವುಗಳನ್ನು ತೆಗೆದುಕೊಂಡು ಹೋದರು. ಆಳುಗಳನ್ನು ಖಡ್ಗದಿಂದ ಸಂಹರಿಸಿದರು. ನಾನೊಬ್ಬನು ಮಾತ್ರ ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ," ಎಂದನು.
18 ಇವನು ಇನ್ನೂ ಮಾತನಾಡುತ್ತಿರಲು, ಮತ್ತೊಬ್ಬ ದೂತನು ಬಂದು, "ನಿನ್ನ ಪುತ್ರ ಪುತ್ರಿಯರೂ ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ದ್ರಾಕ್ಷಾರಸ ಕಡಿಯುತ್ತಾ ಔತಣ ಮಾಡುತ್ತಿರುವಾಗ, 19 ಇದ್ದಕ್ಕಿದ್ದಂತೆ ಮರುಭೂಮಿ ಕಡೆಯಿಂದ ದೊಡ್ಡ ಗಾಳಿ ಬೀಸಿ, ಮನೆಯ ನಾಲ್ಕು ಮೂಲೆಗಳಿಗೆ ಬಡಿಯಿತು. ಮನೆಯು ಯೌವನಸ್ಥರ ಮೇಲೆ ಬಿತ್ತು, ಅವರು ಸತ್ತುಹೋದರು. ನಾನೊಬ್ಬನು ಮಾತ್ರ, ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ," ಎಂದನು.