Publicidade

Jó 23

ಯೋಬನ ಉತ್ತರ

1 ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:

2 "ಇಂದಿಗೂ ನನ್ನ ದೂರು ಕಹಿಯಾಗಿದೆ;

ನಾನು ನಿಟ್ಟುಸಿರಿಟ್ಟರೂ ದೇವರ ಹಸ್ತವು ಭಾರವಾಗಿದೆ.

3 ದೇವರನ್ನು ಎಲ್ಲಿ ಕಂಡುಕೊಳ್ಳಬೇಕೆಂದು ನನಗೆ ತಿಳಿದಿದ್ದರೆ, ಎಷ್ಟೋ ಒಳ್ಳೆಯದು!

ಸಾಧ್ಯವಾದರೆ ನಾನು ದೇವರು ವಾಸಿಸುವ ಸ್ಥಳದ ತನಕ ಹೋಗುತ್ತಿದ್ದೆ.

4 ನನ್ನ ನ್ಯಾಯವನ್ನು ದೇವರ ಮುಂದೆ ವಿವರಿಸುತ್ತಿದ್ದೆ;

ನನ್ನ ಬಾಯನ್ನು ಪ್ರತಿವಾದಗಳಿಂದ ತುಂಬಿಸುತ್ತಿದ್ದೆ.

5 ದೇವರು ನನಗೆ ಉತ್ತರವಾಗಿ ಕೊಡುವ ಮಾತುಗಳನ್ನು ಕಂಡುಹಿಡಿದು,

ದೇವರು ನನಗೆ ಹೇಳುವುದನ್ನು ಪರಿಗಣಿಸುತ್ತಿದ್ದೆ.

6 ದೇವರು ನನ್ನನ್ನು ಕಠಿಣವಾಗಿ ವಿರೋಧಿಸುತ್ತಾರೋ?

ಇಲ್ಲ, ಖಂಡಿತವಾಗಿ ಅವರು ನನ್ನ ವಿರುದ್ಧ ಆರೋಪಗಳನ್ನು ಹೊರಿಸುವುದಿಲ್ಲ.

7 ದೇವರ ಸನ್ನಿಧಿಯಲ್ಲಿ ಯಥಾರ್ಥವಂತನು ತಾನು ನಿರಪರಾಧಿ ಎಂದು ದೃಢಪಡಿಸಲು ಸಾಧ್ಯ;

ಅಲ್ಲಿ ನನಗೆ ನನ್ನ ನ್ಯಾಯಾಧಿಪತಿಯಿಂದ ಶಾಶ್ವತವಾಗಿ ಬಿಡುಗಡೆಯಾಗುವುದು.

8 "ಒಂದು ವೇಳೆ ನಾನು ಪೂರ್ವದೆಡೆಗೆ ಹೋದರೂ ದೇವರು ನನಗೆ ಕಾಣಿಸುವುದಿಲ್ಲ;

ಪಶ್ಚಿಮದೆಡೆಗೆ ಹೋದರೂ ದೇವರು ಕಾಣಿಸುವುದಿಲ್ಲ.

9 ಉತ್ತರದಲ್ಲಿ ಹುಡುಕಿದರೂ ದೇವರನ್ನು ನೋಡಲಾರೆನು;

ದಕ್ಷಿಣದೆಡೆಗೆ ತಿರುಗಿಕೊಂಡರೂ ದೇವರು ಕಾಣಿಸುವುದಿಲ್ಲ.

10 ಆದರೆ ದೇವರು ನಾನು ಹೋಗುವ ಮಾರ್ಗವನ್ನು ತಿಳಿದಿದ್ದಾರೆ;

ದೇವರು ನನ್ನನ್ನು ಪರೀಕ್ಷಿಸಿದಾಗ, ನಾನು ಚೊಕ್ಕ ಬಂಗಾರವಾಗಿ ಹೊರಗೆ ಬರುವೆನು.

11 ನನ್ನ ಪಾದಗಳು ದೇವರ ಹೆಜ್ಜೆಯ ಜಾಡಿನಲ್ಲಿ ನಿಕಟವಾಗಿ ಅನುಸರಿಸಿವೆ;

ದೇವರ ಮಾರ್ಗವನ್ನು ಬಿಟ್ಟು ನಾನು ತೊಲಗದಂತೆ ನೋಡಿಕೊಂಡೆನು.

12 ದೇವರ ತುಟಿಗಳ ಆಜ್ಞೆಯಿಂದ ನಾನು ಹಿಂಜರಿಯಲಿಲ್ಲ;

ನನ್ನ ದೈನಂದಿನ ಆಹಾರಕ್ಕಿಂತ ದೇವರ ಬಾಯಿಯ ಮಾತುಗಳನ್ನು

ನನ್ನೆದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.

13 "ಆದರೆ ದೇವರು ಬದಲಾಗದವರು; ದೇವರನ್ನು ಬದಲಾಯಿಸುವವರು ಯಾರು?

ದೇವರು ತಾವು ಬಯಸಿದ್ದನ್ನು ಮಾಡುತ್ತಾರೆ.

14 ನನಗೆ ನೇಮಿಸಿದ್ದನ್ನು ದೇವರು ಈಡೇರಿಸುತ್ತಾರೆ.

ಇಂಥ ಅನೇಕ ಯೋಜನೆಗಳು ದೇವರಲ್ಲಿವೆ.

15 ಆದ್ದರಿಂದ ನಾನು ದೇವರ ಮುಂದೆ ಗಾಬರಿಗೊಳ್ಳುತ್ತೇನೆ;

ಇದನ್ನೆಲ್ಲಾ ಗ್ರಹಿಸಿಕೊಳ್ಳುವಾಗ ನಾನು ದೇವರಿಗೆ ಭಯಪಡುತ್ತೇನೆ.

16 ದೇವರು ನನ್ನ ಹೃದಯವನ್ನು ಹೆದರಿಸಿದ್ದಾರೆ;

ಸರ್ವಶಕ್ತರು ನನ್ನನ್ನು ಗಾಬರಿಪಡಿಸಿದ್ದಾರೆ.

17 ಆದರೂ ನಾನು ಅಂಧಕಾರದಿಂದ ಮೌನವಾಗಲಿಲ್ಲ;

ನನ್ನ ಮುಖವನ್ನು ಕವಿದಿರುವ ಕಾರ್ಗತ್ತಲಿನ ನಿಮಿತ್ತ ನಾನು ಮಾತಾಡದೆ ಇರುವುದಿಲ್ಲ.

Veja também

Publicidade
Bíblia Online Bíblia Online

Bíblia Online • Versão: 2026-06-19_11-20-24-