Publicidade

Jó 27

ಯೋಬನ ಕೊನೆಯ ಮಾತುಗಳು

1 ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ:

2 ನನ್ನ ನ್ಯಾಯವನ್ನು ತಪ್ಪಿಸಿದ ಜೀವಂತ ದೇವರಾಣೆ,

ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತರ ಆಣೆ,

3 "ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿದೆ;

ದೇವರು ಊದಿದ ಶ್ವಾಸವು ನನ್ನ ಮೂಗಿನಲ್ಲಿ ಆಡುತ್ತಿದೆ.

4 ನನ್ನ ತುಟಿಗಳು ಸುಳ್ಳನ್ನು ನುಡಿಯುವುದೇ ಇಲ್ಲ.

ನನ್ನ ನಾಲಿಗೆಯು ಎಷ್ಟು ಮಾತ್ರಕ್ಕೂ ಮೋಸದ ಮಾತುಗಳನ್ನಾಡುವುದಿಲ್ಲ.

5 ನೀವು ನ್ಯಾಯವಂತರೆಂದು ನಾನು ಒಪ್ಪುವುದಿಲ್ಲ;

ನಾನು ಸಾಯುವ ತನಕ, ನನ್ನ ಪ್ರಾಮಾಣಿಕತ್ವವನ್ನು ಬಿಡುವುದಿಲ್ಲ.

6 ನನ್ನ ನಿಷ್ಕಪಟತೆಯನ್ನು ದೃಢವಾಗಿ ಹಿಡುಕೊಂಡಿದ್ದೇನೆ;

ಅದನ್ನು ಎಂದಿಗೂ ನಾನು ಹೋಗಗೊಡಿಸುವುದಿಲ್ಲ;

ನಾನು ಜೀವಂತವಾಗಿ ಇರುವವರೆಗೂ ನನ್ನ ಮನಸ್ಸಾಕ್ಷಿಯು ನನ್ನನ್ನು ನಿಂದಿಸುವುದಿಲ್ಲ.

7 "ನನ್ನ ಶತ್ರು ದುಷ್ಟನ ಹಾಗಿರಲಿ;

ನನ್ನ ವಿರುದ್ಧ ಏಳುವವನು ಅನ್ಯಾಯವಂತನ ಹಾಗಿರಲಿ.

8 ದೇವರು ಭಕ್ತಿಹೀನನನ್ನು ಕಡಿದುಬಿಟ್ಟರೆ, ಅವನ ಪ್ರಾಣ ತೆಗೆದುಕೊಂಡರೆ,

ಅವನಿಗೆ ನಿರೀಕ್ಷೆ ಎಲ್ಲಿ?

9 ಭಕ್ತಿಹೀನನಿಗೆ ಯಾತನೆ ಬಂದರೆ,

ದೇವರು ಅವನ ಮೊರೆಯನ್ನು ಕೇಳುವರೋ?

10 ಭಕ್ತಿಹೀನನು ಸರ್ವಶಕ್ತರಲ್ಲಿ ಆನಂದವಾಗಿರುವನೋ?

ಸರ್ವಕಾಲದಲ್ಲಿಯೂ ದೇವರನ್ನು ಕರೆಯುವನೋ?

11 "ನಾನು ದೇವರ ಶಕ್ತಿಯ ಬಗ್ಗೆ ನಿಮಗೆ ಬೋಧಿಸುವೆನು;

ಸರ್ವಶಕ್ತರ ಮಾರ್ಗಗಳನ್ನು ನಾನು ಮರೆಮಾಡೆನು.

12 ನೀವೆಲ್ಲರೂ ಇದನ್ನು ನೋಡಿದ್ದರೂ,

ಮತ್ತೆ ಏಕೆ ಈ ಪ್ರಕಾರ ವ್ಯರ್ಥವಾಗಿ ವಾದಿಸುತ್ತೀರಿ?

13 "ಇದು ದುಷ್ಟರಿಗೆ ದೇವರಿಂದ ಬಂದ ಪಾಲಾಗಿದೆ;

ಹಿಂಸಕರಿಗೆ ಸರ್ವಶಕ್ತರಿಂದ ಹೊಂದುವ ಪಾಲು ಹೀಗಿರುತ್ತವೆ:

14 ಅವರ ಮಕ್ಕಳು ಹೆಚ್ಚಿದರೂ ಖಡ್ಗಕ್ಕೆ ಗುರಿಯಾಗುವರು;

ಅವರ ಸಂತತಿಯವರಿಗೆ ಆಹಾರದ ಕೊರತೆ ಇರುವುದು.

15 ಅವರ ಮನೆಯಲ್ಲಿ ಯಾರಾದರೂ ಉಳಿದರೆ, ವ್ಯಾಧಿಯಿಂದ ಸತ್ತು ಸಮಾಧಿ ಸೇರುವರು;

ಅವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸುವುದಿಲ್ಲ.

16 ದುಷ್ಟರು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ,

ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿಕೊಂಡಿದ್ದರೂ,

17 ಅವರು ಕೂಡಿಸಿಟ್ಟಿದ್ದನ್ನು ನೀತಿವಂತರು ಹಂಚಿಕೊಳ್ಳುವರು;

ಅವರ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.

18 ದುಷ್ಟರು ಕಟ್ಟಿಕೊಂಡ ಮನೆಯು ಜೇಡ ಹುಳದ ಗೂಡಿನಂತೆಯೂ,

ಕಾವಲುಗಾರನ ಗುಡಿಸಿಲಂತೆಯೂ ದುರ್ಬಲವಾಗಿರುವುದು.

19 ದುಷ್ಟರು ಧನಿಕರಾಗಿ ನಿದ್ರಿಸಿದರೂ ಮತ್ತೆ ನಿದ್ರೆಬಾರದು;

ಅವರು ತಮ್ಮ ಕಣ್ಣನ್ನು ತೆರೆಯುತ್ತಲೇ ಆಸ್ತಿ ಇಲ್ಲವಾಗಿರುವುದು.

20 ವಿಪತ್ತುಗಳು ಪ್ರವಾಹದಂತೆ ಅಂಥವರನ್ನು ಹಿಡಿಯುವುವು;

ರಾತ್ರಿಯಲ್ಲಿ ಬಿರುಗಾಳಿ ಅಂಥವರನ್ನು ಅಪಹರಿಸುವುದು.

21 ಪೂರ್ವದಿಕ್ಕಿನ ಗಾಳಿ ದುಷ್ಟರನ್ನು ಬಡಿಯಲು, ಅವರು ಕೊಚ್ಚಿಕೊಂಡು ಹೋಗುವರು;

ಅದು ಅವರನ್ನು ಅವರ ಸ್ಥಳದಿಂದ ಹಾರಿಸಿಬಿಡುವುದು.

22 ಆ ಗಾಳಿಯು ಕರುಣೆ ಇಲ್ಲದೆ ದುಷ್ಟರ ಮೇಲೆ ಬೀಸಲು,

ಅವರು ಅದರ ಶಕ್ತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವರು.

23 ಕೊನೆಗೆ ಜನರು ದುಷ್ಟರ ಕಡೆಗೆ ಅಪಹಾಸ್ಯದಿಂದ ಚಪ್ಪಾಳೆ ತಟ್ಟುವರು;

ಅನಂತರ ಅವರ ಸ್ಥಳದೊಳಗಿಂದ ಅವರನ್ನು ಹೊರಹಾಕುವರು."

Veja também

Publicidade
Bíblia Online Bíblia Online

Bíblia Online • Versão: 2026-06-19_11-20-24-