Publicidade

Jó 18

ಬಿಲ್ದದನ ವಾದ

1 ಆಗ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೀಗೆಂದನು:

2 "ಯೋಬನೇ, ಈ ಮಾತುಗಳನ್ನು ನೀನು ಯಾವಾಗ ಕೊನೆಗೊಳಿಸುತ್ತೀ?

ವಿವೇಕಿಯಾಗು, ಆಮೇಲೆ ಮಾತನಾಡೋಣ.

3 ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ?

ನಿನ್ನ ದೃಷ್ಟಿಯಲ್ಲಿ ನಾವು ದಡ್ಡರೋ?

4 ಕೋಪದಿಂದ ನಿನ್ನನ್ನು ನೀನೇ ಸೀಳಿಕೊಳ್ಳುವೆಯಾ?

ನಿನ್ನ ನಿಮಿತ್ತ ಭೂಮಿ ಹಾಳಾಗಬೇಕೋ?

ಬಂಡೆಯು ತನ್ನ ಸ್ಥಳದಿಂದ ತೊಲಗಬೇಕೋ?

5 "ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿಹೋಗುವುದು;

ಅವನ ಬಾಳಿನ ಬೆಂಕಿಯ ಜ್ವಾಲೆಯು ಉರಿಯದೆ ಹೋಗುವುದು.

6 ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು;

ಅವನ ಮೇಲಣ ತೂಗು ದೀಪವು ಆರಿಹೋಗುವುದು.

7 ಅವನ ಬಲವುಳ್ಳ ಹೆಜ್ಜೆಗಳು ದುರ್ಬಲಗೊಳ್ಳುವುದು;

ಅವನ ಯೋಜನೆಗಳೇ ಅವನನ್ನು ಕೆಡವಿಹಾಕುವವು.

8 ಏಕೆಂದರೆ ದುಷ್ಟನು ತನ್ನ ಹೆಜ್ಜೆಗಳಿಂದಲೇ ಬಲೆಯಲ್ಲಿ ಬೀಳುವನು;

ಅವನು ಕುಣಿಯಲ್ಲಿ ಬಿದ್ದು ಅಲೆದಾಡುವನು.

9 ಬೋನು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವುದು;

ಉರುಳು ಅವನನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು.

10 ನೆಲದ ಮೇಲೆ ಪಾಶವೂ,

ದಾರಿಯಲ್ಲಿ ಜಾಲವೂ ಅವನಿಗೆ ಹೊಂಚಿಕೊಂಡಿರುವುವು.

11 ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ,

ಅವನ ಕಾಲುಗಳನ್ನು ಓಡುವಂತೆ ಮಾಡುವುವು.

12 ಅವನ ಬಲವು ಕುಸಿಯುವುದು;

ವಿನಾಶವು ಅವನ ಬೀಳುವಿಕೆಗಾಗಿ ಸಿದ್ಧವಾಗಿರುವುದು.

13 ಅದು ಅವನ ಚರ್ಮದ ಬಲವನ್ನು ತಿಂದುಬಿಡುವುದು;

ಮರಣದ ಚೊಚ್ಚಲತನವು ಅವನ ಅಂಗಾಂಗಗಳನ್ನು ನುಂಗಿಬಿಡುವುದು.

14 ಅವನು ಭದ್ರತೆಯ ಗುಡಾರದಿಂದ ಹೊರಬೀಳುವನು.

ಅವನು ಭಯಂಕರ ಅರಸನ ಬಳಿಗೆ ಸಾಗಬೇಕಾಗುವುದು.

15 ಬೆಂಕಿಯು ಅವನ ಮನೆಯನ್ನು ಸುಡುವುದು;

ಅವನ ಮನೆಯ ಮೇಲೆ ಗಂಧಕವನ್ನು ಎರಚಲಾಗುವುದು.

16 ಬುಡದಿಂದ ಅವನ ಬೇರುಗಳು ಒಣಗುವುವು;

ಮೇಲಿನಿಂದ ಅವನ ರೆಂಬೆಯು ಬಾಡುವುದು.

17 ಅವನ ಸ್ಮರಣೆಯು ಭೂಮಿಯಿಂದ ಅಳಿದುಹೋಗುವುದು;

ನಾಡಿನಲ್ಲಿ ಅವನ ಹೆಸರು ಇಲ್ಲದೆ ಹೋಗುವುದು.

18 ಬೆಳಕಿನಿಂದ ಅವನನ್ನು ಕತ್ತಲೆಗೆ ದಬ್ಬಲಾಗುವುದು;

ಅವನು ಲೋಕದಿಂದ ಬಹಿಷ್ಕರಿಸಲಾಗುವನು.

19 ಅವನ ಜನರಲ್ಲಿ ಅವನಿಗೆ ಮಗನೂ, ಮೊಮ್ಮಗನೂ ಇರುವುದಿಲ್ಲ,

ಅವನು ವಾಸಿಸಿದ ಸ್ಥಳದಲ್ಲಿ ಯಾರೂ ಉಳಿಯುವುದಿಲ್ಲ.

20 ಪಶ್ಚಿಮ ಜನರು ಅವನ ಸ್ಥಿತಿಯನ್ನು ನೋಡಿ ಆಶ್ಚರ್ಯಪಡುವರು;

ಪೂರ್ವದ ಕಡೆಯವರನ್ನು ದಿಗಿಲು ಹಿಡಿಯುವುದು.

21 ನಿಶ್ಚಯವಾಗಿ ದುಷ್ಟರ ನೆಲೆಯು ಹೀಗೆಯೇ ಇರುವುದು;

ದೇವರನ್ನು ಅರಿಯದವನ ಸ್ಥಿತಿ ಇದೇ."

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-