Publicidade

Jó 26

ಯೋಬನ ಉತ್ತರ

1 ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು:

2 "ಶಕ್ತಿ ಇಲ್ಲದವನಿಗೆ ನೀನು ಹೇಗೆ ಸಹಾಯ ಮಾಡಿದೆ?

ತ್ರಾಣವಿಲ್ಲದ ಕೈಯನ್ನು ಹೇಗೆ ರಕ್ಷಿಸಿದೆ?

3 ಜ್ಞಾನವಿಲ್ಲದವನಿಗೆ ಏನು ಬುದ್ಧಿವಾದ ಹೇಳಿರುವೆ?

ನೀನು ಯಾವ ವಿವೇಕದ ಮಾತುಗಳನ್ನು ಬಹಳವಾಗಿ ಪ್ರದರ್ಶಿಸಿದೆ.

4 ಈ ಮಾತುಗಳನ್ನು ಹೇಳಲು ನಿನಗೆ ಯಾರು ಸಹಾಯ ಮಾಡಿದರು?

ಯಾರ ಆತ್ಮವು ನಿನ್ನ ಬಾಯಿಂದ ಮಾತಾಡಿದ್ದು?

5 "ಸಾಗರದ ಕೆಳಗಿನ ಲೋಕದಲ್ಲಿ ವಾಸಿಸುವ

ಸತ್ತವರ ಆತ್ಮಗಳು ಆಳವಾದ ಯಾತನೆಯಲ್ಲಿವೆ.

6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ;

ನಾಶಲೋಕವು ದೇವರಿಗೆ ಮರೆಯಾಗಿಲ್ಲ.

7 ದೇವರು ಉತ್ತರ ದಿಕ್ಕಿನ ಆಕಾಶವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾರೆ;

ದೇವರು ಭೂಮಿಯನ್ನು ಏನೂ ಇಲ್ಲದರ ಮೇಲೆ ತೂಗು ಹಾಕಿದ್ದಾರೆ.

8 ತಮ್ಮ ಮೇಘಗಳಲ್ಲಿ ನೀರನ್ನು ತುಂಬಿ ಕಟ್ಟುತ್ತಾರೆ;

ಆದರೂ ಮೋಡವು ಅದರ ಭಾರದಿಂದ ಒಡೆದುಹೋಗುವುದಿಲ್ಲ.

9 ದೇವರು ತಮ್ಮ ಪೂರ್ಣಚಂದ್ರ ಸಿಂಹಾಸನವನ್ನು ಮರೆಮಾಡುತ್ತಾರೆ.

ಅದರ ಮುಂದೆ ಮೋಡವನ್ನು ಕವಿಸುತ್ತಾರೆ.

10 ಬೆಳಕು ಮತ್ತು ಕತ್ತಲುಗಳ ಸಂಧಿಸುವ ಸ್ಥಾನದಲ್ಲಿ,

ಸಮುದ್ರದ ಮೇಲೆ ಸುತ್ತಲೂ ವೃತ್ತ ಮೇರೆಯನ್ನು ಹಾಕಿದ್ದಾರೆ.

11 ಆಕಾಶಮಂಡಲದ ಸ್ತಂಭಗಳು ಕಂಪಿಸುತ್ತವೆ;

ದೇವರ ಗದರಿಕೆಗೆ ಅವು ಬೆರಗಾಗಿ ಕದಲುತ್ತವೆ.

12 ದೇವರು ತಮ್ಮ ಶಕ್ತಿಯಿಂದ ಸಮುದ್ರವನ್ನು ಕಲಕಿದ್ದಾರೆ;

ದೇವರು ತಮ್ಮ ಜ್ಞಾನದಿಂದ ಘಟಸರ್ಪನಾದ ರಹಾಬನನ್ನು ಹೊಡೆದುಹಾಕುತ್ತಾರೆ.

13 ದೇವರ ಶ್ವಾಸದಿಂದ ಆಕಾಶಮಂಡಲವು ಶುಭ್ರವಾಗಿದೆ;

ದೇವರು ಹಸ್ತವು ಹರಿದೋಡುವ ಸರ್ಪವನ್ನು ಇರಿಯುತ್ತದೆ.

14 ಇಗೋ, ಇವು ದೇವರ ಕಾರ್ಯಗಳಲ್ಲಿ ಕೆಲವು ಮಾತ್ರ;

ದೇವರನ್ನು ಕುರಿತು ಪಿಸುಧ್ವನಿ ಮಾತ್ರ ಕೇಳಿದ್ದೇವೆ;

ಹಾಗಾದರೆ, ದೇವರ ಪರಾಕ್ರಮದ ಗುಡುಗನ್ನು ಯಾರು ಗ್ರಹಿಸಿಕೊಳ್ಳುವರು?"

Veja também

Publicidade
Bíblia Online Bíblia Online

Bíblia Online • Versão: 2026-06-19_11-20-24-