Publicidade

Jó 29

ಯೋಬನ ಕೊನೆಯ ಸಂಭಾಷಣೆ

1 ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ:

2 "ಕಳೆದುಹೋದ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಒಳ್ಳೆಯದು;

ಆಗ ದೇವರು ನನ್ನನ್ನು ಕಾಪಾಡುತ್ತಿದ್ದರಲ್ಲವೆ?

3 ದೇವರ ದೀಪವು ನನ್ನ ತಲೆಯ ಮೇಲೆ ಬೆಳಗುತ್ತಿತ್ತು;

ನಾನು ದೇವರ ಬೆಳಕಿನಿಂದ ಕತ್ತಲಲ್ಲಿ ನಡೆಯುತ್ತಿದ್ದೆ.

4 ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ

ದೇವರ ಸ್ನೇಹವು ನನ್ನ ಗುಡಾರದ ಮೇಲೆ ಇರುತ್ತಿತ್ತು.

5 ಆಗ ಸರ್ವಶಕ್ತರು ನನ್ನ ಸಂಗಡ ಇರುತ್ತಿದ್ದರು;

ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು.

6 ನನ್ನ ಹೆಜ್ಜೆಗಳನ್ನು ಮೊಸರಿನಿಂದ ತೊಳೆಯುತ್ತಾ ಇದ್ದೆನು;

ಬಂಡೆಯಿಂದ ನನಗೆ ಓಲಿವ್ ಎಣ್ಣೆ ಪ್ರವಾಹವಾಗಿ ಸುರಿಸುತ್ತಿತ್ತು.

7 "ನಾನು ಪಟ್ಟಣದ ಮುಂಬಾಗಿಲಿಗೆ ಹೋದಾಗ,

ಬೀದಿಯಲ್ಲಿ ನನ್ನ ಪೀಠದ ಮೇಲೆ ಕುಳಿತುಕೊಂಡಾಗ,

8 ಯುವಕರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು;

ವೃದ್ಧರು ಸಹ ಎದ್ದು ನಿಲ್ಲುತ್ತಿದ್ದರು.

9 ಪ್ರಧಾನರು ನುಡಿಗಳನ್ನು ಬಿಗಿ ಹಿಡಿದು,

ತಮ್ಮ ಬಾಯಿಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು.

10 ಘನವಂತರು ಮೌನ ತಾಳುತ್ತಿದ್ದರು;

ಅವರ ನಾಲಿಗೆ ಅವರ ಬಾಯಿಯ ಅಂಗಳಕ್ಕೆ ಅಂಟಿರುತ್ತಿತ್ತು.

11 ಕೇಳಿದ ಕಿವಿಯು ನನ್ನನ್ನು ಹರಸುತ್ತಿತ್ತು;

ನೋಡಿದವರು ನನ್ನನ್ನು ಗೌರವಿಸುತ್ತಿದ್ದರು.

12 ಏಕೆಂದರೆ ಅಂಗಲಾಚುವ ಬಡವನನ್ನೂ,

ಸಹಾಯಕನಿಲ್ಲದ ಅನಾಥನನ್ನೂ ನಾನು ರಕ್ಷಿಸುವವನಾಗಿದ್ದೆನು.

13 ಸಾಯುತ್ತಿದ್ದವರ ಆಶೀರ್ವಾದವು ನನ್ನ ಮೇಲೆ ಬರುತ್ತಿತ್ತು;

ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ಮಾಡುತ್ತಿದ್ದೆನು.

14 ನಾನು ನೀತಿಯನ್ನು ನನ್ನ ಬಟ್ಟೆಯಂತೆ ಧರಿಸಿದ್ದೆನು;

ನನ್ನ ನ್ಯಾಯವು ನಿಲುವಂಗಿಯ ಹಾಗೆಯೂ ಪೇಟದ ಹಾಗೆಯೂ ಇರುತ್ತಿತ್ತು.

15 ನಾನು ಕುರುಡನಿಗೆ ಕಣ್ಣೂ,

ಕುಂಟನಿಗೆ ಕಾಲೂ ಆಗಿದ್ದೆನು.

16 ದರಿದ್ರರಿಗೆ ನಾನು ತಂದೆಯಾಗಿದ್ದೆನು;

ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು.

17 ದುಷ್ಟರ ದವಡೆಗಳನ್ನು ಮುರಿಯುತ್ತಿದ್ದೆನು;

ದುಷ್ಟರ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ಬಿಡಿಸುತ್ತಿದ್ದೆನು.

18 "ಆಗ ನಾನು, ‘ನನ್ನ ಮನೆಯಲ್ಲಿಯೇ ನಾನು ಸಾಯುವೆನು;

ಮರಳಿನಂತೆ ನನ್ನ ದಿವಸಗಳು ಇರುತ್ತವೆ,

19 ನನ್ನ ಬೇರು ನೀರಿನ ಬಳಿ ಹಬ್ಬಿರುತ್ತದೆ;

ರಾತ್ರಿಯಿಡಿ ನನ್ನ ಕೊಂಬೆಯ ಮೇಲೆ ಮಂಜು ಬಿದ್ದಿರುತ್ತದೆ.

20 ನನ್ನ ಘನವು ನನ್ನಲ್ಲಿ ಹೊಸದಾಗಿ ಇರುತ್ತದೆ;

ನನ್ನ ಬಿಲ್ಲು ಸಹ ನನ್ನ ಕೈಯಲ್ಲಿ ಎಂದೆಂದಿಗೂ ಬಲಗೊಳ್ಳುತ್ತಾ ಇರುತ್ತದೆ,’

ಎಂದೆಲ್ಲಾ ಹೇಳುತ್ತಿದ್ದೆನು.

21 "ಜನರು ನನಗೆ ಕಿವಿಗೊಟ್ಟು ಎದುರುನೋಡುತ್ತಿದ್ದರು.

ನನ್ನ ಆಲೋಚನೆ ಕೇಳಲು ಮೌನವಾಗಿರುತ್ತಿದ್ದರು.

22 ನನ್ನ ಮಾತಿನ ಮೇಲೆ ಅವರು ಬೇರೆ ಮಾತನಾಡುತ್ತಿರಲಿಲ್ಲ;

ನನ್ನ ನುಡಿ ಅವರ ಕಿವಿಗೆ ಬೀಳುತ್ತಿತ್ತು.

23 ಮಳೆಯಂತೆ ನನ್ನನ್ನು ಎದುರುನೋಡುತ್ತಿದ್ದರು.

ಮುಂಗಾರಿನ ಮಳೆಯಹಾಗೆ ನನ್ನ ಮಾತುಗಳಲ್ಲಿ ಉಲ್ಲಾಸಿಸುತ್ತಿದ್ದರು.

24 ನಾನು ಅವರನ್ನು ನೋಡಿ ಮುಗುಳ್ನಗಿದಾಗ, ಅವರು ಅದನ್ನು ನಂಬಲಿಲ್ಲ;

ನನ್ನ ಮುಖದ ಕಾಂತಿ ಅವರಿಗೆ ಅಮೂಲ್ಯವಾಗಿತ್ತು.

25 ನಾನು ಅವರ ಪ್ರಧಾನನಾಗಿ ಕೂತು

ಸೈನ್ಯಗಳ ನಡುವೆ ಅರಸನಂತೆ ಆಸೀನನಾಗಿದ್ದೆನು.

ನಾನು ದುಃಖಿಸುವವರನ್ನು ಸಂತೈಸುವವನಾಗಿಯೂ ಇದ್ದೆನು.

Veja também

Publicidade
Bíblia Online Bíblia Online

Bíblia Online • Versão: 2026-06-19_11-20-24-