Pular para o conteúdo
Publicidade

ಯೋಬ 3

ಯೋಬನು ಮಾತನಾಡಿದನು

1 ಆಮೇಲೆ ಯೋಬನು ತನ್ನ ಬಾಯಿತೆರೆದು, ತನ್ನ ಜನ್ಮ ದಿವಸವನ್ನು ಶಪಿಸಿದನು. 2 ಯೋಬನು ಇಂತೆಂದನು:

3 "ನಾನು ಹುಟ್ಟಿದ ದಿವಸವೂ,

‘ಗಂಡು ಮಗುವನ್ನು ಗರ್ಭಧರಿಸಿದೆ!’ ಎಂದು ಹೇಳಿದ ರಾತ್ರಿಯೂ ನಾಶವಾಗಲಿ.

4 ಆ ದಿವಸವು ಕತ್ತಲಾಗಲಿ,

ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ,

ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.

5 ಕತ್ತಲೂ ಕಾರ್ಗತ್ತಲೂ ಆ ದಿನವನ್ನು ವಶಮಾಡಿಕೊಳ್ಳಲಿ;

ಮೋಡವು ಅದರ ಮೇಲೆ ಕವಿಯಲಿ;

ಕತ್ತಲೆ ಅದನ್ನು ಭಯಪಡಿಸಲಿ.

6 ಆ ರಾತ್ರಿಯನ್ನು ಅಂಧಕಾರವು ಮುತ್ತಲಿ;

ವರ್ಷದ ದಿನಗಳಲ್ಲಿ ಆ ದಿನವನ್ನು ಸೇರಿಸದಿರಲಿ.

ಅದು ತಿಂಗಳುಗಳನ್ನು ಲೆಕ್ಕಿಸದಿರಲಿ.

7 ಇಗೋ ಆ ರಾತ್ರಿಯು ಬಂಜೆಯಾಗಲಿ;

ಅದರಲ್ಲಿ ಆನಂದ ಧ್ವನಿಯು ಕೇಳದಿರಲಿ.

8 ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ

ದಿನಗಳನ್ನು ಶಪಿಸುವುದರಲ್ಲಿಯೂ ನಿಪುಣರಾದವರು ಆ ದಿನವನ್ನು ಶಪಿಸಲಿ.

9 ಅದರ ಮುಂಜಾನೆಯ ನಕ್ಷತ್ರಗಳು ಕಪ್ಪಾಗಲಿ;

ಅದು ಬೆಳಕಿಗೋಸ್ಕರ ಕಾದುಕೊಂಡರೂ ಬಾರದಿರಲಿ

ಅರುಣೋದಯವು ಆ ದಿನವನ್ನು ನೋಡದಿರಲಿ.

10 ಏಕೆಂದರೆ ಆ ದಿನವು ನನ್ನ ತಾಯಿಯ ಗರ್ಭದ ಬಾಗಿಲನ್ನು ಮುಚ್ಚಲಿಲ್ಲ,

ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ.

11 "ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ?

ನಾನು ಗರ್ಭದಿಂದ ಬಂದಾಗಲೇ ಏಕೆ ಪ್ರಾಣ ಬಿಡಲಿಲ್ಲ?

12 ತಾಯಿಯ ಮಡಿಲು ನನ್ನನ್ನು ಸ್ವಿಕರಿಸಿದ್ದೇಕೆ?

ತಾಯಿಯ ಮೊಲೆಹಾಲು ಕುಡಿಯಮಾಡಿದ್ದೇಕೆ?

13 ಆಗ ಸತ್ತಿದ್ದರೆ ನಾನು ಶಾಂತವಾಗಿ ಮಲಗಿಕೊಳ್ಳುತ್ತಿದ್ದೆನು;

ನಾನು ವಿಶ್ರಾಂತಿಯಲ್ಲಿರುತ್ತಿದ್ದೆನು.

14 ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು

ತಮಗಾಗಿ ಕಟ್ಟಿಸಿಕೊಂಡ ರಾಜರೊಂದಿಗೂ ಮಂತ್ರಿಗಳೊಡನೆಯೂ ನಾನಿರುತ್ತಿದ್ದೆನು.

15 ಬಂಗಾರವನ್ನು ಕೂಡಿಸಿಟ್ಟು, ತಮ್ಮ ಮನೆಗಳನ್ನು ಬೆಳ್ಳಿಯಿಂದ

ತುಂಬಿಸಿದ ಅಧಿಪತಿಗಳ ಸಂಗಡ ವಿಶ್ರಮಿಸಿಕೊಳ್ಳುತ್ತಿದ್ದೆನು.

16 ಗರ್ಭಸ್ರಾವವಾಗಿ ಹೂಣಿಟ್ಟ ಪಿಂಡದಂತೆಯೂ

ಬೆಳಕನ್ನು ನೋಡದ ಕೂಸುಗಳಂತೆಯೂ ನಾನೇಕೆ ಆಗಲಿಲ್ಲ?

17 ಅಲ್ಲಿ ದುಷ್ಟರು ತೊಂದರೆ ಕೊಡುವುದು ಇರುವುದಿಲ್ಲ.

ಶಕ್ತಿ ಕುಂದಿದವರು ಅಲ್ಲಿ ವಿಶ್ರಾಂತಿ ಹೊಂದಿರುತ್ತಾರೆ.

18 ಸೆರೆಯವರು ಕೂಡ ಶಾಂತವಾಗಿರುತ್ತಾರೆ;

ಬಾಧೆಪಡಿಸುವವನ ಶಬ್ದವನ್ನು ಕೇಳುವುದಿಲ್ಲ.

19 ಅಲ್ಲಿ ಕಿರಿಯರು ಹಿರಿಯರು ಎಂಬ ಭೇದ ಇಲ್ಲಾ;

ಗುಲಾಮರು ಯಜಮಾನರಿಂದ ಬಿಡುಗಡೆಯಾಗಿರುತ್ತಾರೆ.

20 "ಕಷ್ಟದಲ್ಲಿ ಇರುವವನಿಗೆ ಬೆಳಕೂ

ಕಹಿ ಮನಸ್ಸುಳ್ಳವರಿಗೆ ಜೀವವನ್ನು ಕೊಡುವುದೇಕೆ?

21 ಅವರು ನಿಕ್ಷೇಪಕ್ಕಾಗಿ ಅಗಿಯುವ ಆಶೆಗಿಂತಲೂ

ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು.

22 ಅವರು ಸಮಾಧಿ ಸೇರಿದ ಮೇಲೆ

ಸಂತೋಷ ಸಂಭ್ರಮದಿಂದ ಹರ್ಷಿಸುವರೋ?

23 ದೇವರು ಸುತ್ತಲೂ ಬೇಲಿಹಾಕಿ,

ದಾರಿ ಮುಚ್ಚಿದ ಮೇಲೆ ಅವರಿಗೆ ಬೆಳಕು ಏಕೆ?

24 ನಿಟ್ಟುಸಿರೇ ನನ್ನ ದೈನಂದಿನ ಆಹಾರವಾಗಿದೆ;

ನನ್ನ ನರಳಾಟವು ಜಲಧಾರೆಯಂತಿದೆ.

25 ನನಗೆ ಭಯ ಹುಟ್ಟಿದೊಡನೆ ಆಪತ್ತು ಬಂದೊದಗುತ್ತದೆ;

ಯಾವುದಕ್ಕೆ ಹೆದರುತ್ತೇನೋ, ಅದೇ ತಪ್ಪದೆ ಸಂಭವಿಸುತ್ತದೆ.

26 ನನಗೆ ಶಾಂತಿ ಇಲ್ಲ, ವಿಶ್ರಾಂತಿಯೂ ಇಲ್ಲ;

ನಾನು ಸಮಾಧಾನವಾಗಿಯೂ ಇಲ್ಲ, ಯಾವಾಗಲೂ ಕಳವಳವೇ ಇರುತ್ತದೆ."

Estes versículos te tocaram? Ore agora!

+581 estão orando agora.

Junte-se à corrente de oração.