10 ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥನೆ ಮಾಡಿದ ತರುವಾಯ ಯೆಹೋವ ದೇವರು ಅವನ ಸಂಪತ್ತನ್ನು ಪುನಃಸ್ಥಾಪಿಸಿದರು. ಯೆಹೋವ ದೇವರು ಯೋಬನಿಗೆ ಮೊದಲು ಇದ್ದವುಗಳಿಗಿಂತ ಎರಡರಷ್ಟು ಕೊಟ್ಟರು. 11 ಆಗ ಯೋಬನ ಎಲ್ಲಾ ಸಹೋದರರು, ಸಹೋದರಿಯರು, ಹಿಂದಿನ ಪರಿಚಿತರೆಲ್ಲರೂ ಅವನ ಬಳಿಗೆ ಬಂದರು. ಅವರು ಯೋಬನ ಸಂಗಡ ಅವನ ಮನೆಯಲ್ಲಿ ಊಟಮಾಡಿ, ಯೆಹೋವ ದೇವರು ಅವನ ಮೇಲೆ ಬರಮಾಡಿದ ಎಲ್ಲಾ ಆಪತ್ತಿಗಾಗಿ ಸಂತಾಪ ವ್ಯಕ್ತಪಡಿಸಿ ಅವನನ್ನು ಸಂತೈಸಿದರು. ಪ್ರತಿಯೊಬ್ಬರೂ ಒಂದೊಂದು ಬೆಳ್ಳಿ ನಾಣ್ಯವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಯೋಬನಿಗೆ ಕೊಟ್ಟರು.
12 ಇದಲ್ಲದೆ ಯೆಹೋವ ದೇವರು ಯೋಬನ ಆರಂಭಕ್ಕಿಂತ ಅವನ ಅಂತ್ಯವನ್ನು ಅಧಿಕವಾಗಿ ಆಶೀರ್ವದಿಸಿದರು. ಯೋಬನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಸಾವಿರ ಜೋಡಿ ಎತ್ತುಗಳೂ ಸಾವಿರ ಕತ್ತೆಗಳೂ ದೊರಕಿದವು. 13 ಅವನಿಗೆ ಏಳು ಪುತ್ರರೂ ಮೂರು ಪುತ್ರಿಯರೂ ಹುಟ್ಟಿದರು. 14 ಯೋಬನು ಮೊದಲನೆಯವಳಿಗೆ ಯೆಮೀಮಳೆಂದೂ ಎರಡನೆಯವಳಿಗೆ ಕೆಚೀಯಳೆಂದೂ ಮೂರನೆಯವಳಿಗೆ ಕೆರೆನ್ ಹಪ್ಪೂಕ್ ಎಂದೂ ಹೆಸರಿಟ್ಟನು. 15 ಯೋಬನ ಪುತ್ರಿಯರ ಹಾಗೆ ಸೌಂದರ್ಯವತಿಯರು ದೇಶದಲ್ಲೆಲ್ಲೂ ಇರಲಿಲ್ಲ. ಅವರ ತಂದೆ ಅವರ ಅಣ್ಣತಮ್ಮಂದಿರಿಗೆ ಕೊಟ್ಟಹಾಗೆ ಅವರಿಗೂ ಸೊತ್ತನ್ನು ಹಂಚಿದನು.
16 ತರುವಾಯ ಯೋಬನು ನೂರ ನಾಲ್ವತ್ತು ವರ್ಷ ಬಾಳಿದನು. ನಾಲ್ಕನೆಯ ತಲೆಮಾರು ತನಕ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಂಡನು. 17 ಅನಂತರ ಯೋಬನು, ದಿನತುಂಬಿದ ಮುದುಕನಾಗಿ ಸತ್ತನು.