12 ಆದರೆ ಜ್ಞಾನವು ಎಲ್ಲಿ ದೊರಕುವುದು?
ಗ್ರಹಿಕೆ ಇರುವ ಸ್ಥಳ ಎಲ್ಲಿ?
13 ಜ್ಞಾನದ ಮೌಲ್ಯ ಯಾರಿಗೂ ಗೊತ್ತಿಲ್ಲ;
ಜೀವಿಸುವವರಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು.
14 ಸಾಗರ, "ಜ್ಞಾನವು ನನ್ನ ಹತ್ತಿರ ಇಲ್ಲ," ಎನ್ನುತ್ತದೆ;
ಸಮುದ್ರವು, "ಜ್ಞಾನವು ನನ್ನ ಬಳಿಯಲ್ಲಿ ಇಲ್ಲ," ಎನ್ನುತ್ತದೆ.
15 ಚೊಕ್ಕ ಬಂಗಾರಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲಾಗದು;
ಜ್ಞಾನದ ಬೆಲೆಗೆ ಬೆಳ್ಳಿಯನ್ನು ತೂಕಮಾಡಲಾಗದು.
16 ಜ್ಞಾನವನ್ನು ಓಫಿರಿನ ಬಂಗಾರಕ್ಕೂ,
ಅಮೂಲ್ಯವಾದ ಗೋಮೇಧಿಕಕ್ಕೂ, ಇಂದ್ರನೀಲಕ್ಕೂ ಬೆಲೆ ಕಟ್ಟಲಾಗದು.
17 ಬಂಗಾರವೂ, ಸ್ಪಟಿಕವೂ ಜ್ಞಾನಕ್ಕೆ ಸಮವಾಗಿರುವುದಿಲ್ಲ;
ಬಂಗಾರದ ಆಭರಣಗಳು ಸಹ ಜ್ಞಾನಕ್ಕೆ ಸಮವಲ್ಲ.
18 ಹವಳವೂ, ಸೂರ್ಯಕಾಂತ ಶಿಲೆಯೂ ಜ್ಞಾನಕ್ಕೆ ಹೋಲಿಸಲು ಅರ್ಹವಲ್ಲ;
ಜ್ಞಾನದ ಬೆಲೆಯು ಮಾಣಿಕ್ಯಗಳಿಗಿಂತ ಎಷ್ಟೋ ಶ್ರೇಷ್ಠ!
19 ಕೂಷ್ ದೇಶದ ಪುಷ್ಯರಾಗವು ಸಹ ಜ್ಞಾನಕ್ಕೆ ಹೋಲಿಸಲಾಗುವುದಿಲ್ಲ;
ಶುದ್ಧ ಬಂಗಾರದಿಂದಲೂ ಜ್ಞಾನವನ್ನು ಕೊಂಡುಕೊಳ್ಳಲಾಗದು.
20 ಆದರೆ ಜ್ಞಾನವು ಎಲ್ಲಿಂದ ಬರುವುದು?
ಗ್ರಹಿಕೆಯ ಸ್ಥಳವು ಎಲ್ಲಿ?
21 ಎಲ್ಲಾ ಜೀವಿಗಳ ಕಣ್ಣಿಗೂ ಜ್ಞಾನ ಮರೆಯಾಗಿದೆ;
ಆಕಾಶದ ಪಕ್ಷಿಗಳಿಗೂ ಅದು ಗೋಚರವಾಗದು.
22 ನಾಶಲೋಕವೂ ಮರಣವೂ, "ನಾವು ಜ್ಞಾನದ ಸುದ್ದಿಯನ್ನು
ನಮ್ಮ ಕಿವಿಗಳಿಂದ ಕೇಳಿದ್ದೇವೆ ಅಷ್ಟೇ," ಎನ್ನುತ್ತವೆ.