4 "ನಾನು ಭೂಮಿಗೆ ಅಸ್ತಿವಾರ ಹಾಕಿದಾಗ, ನೀನು ಎಲ್ಲಿ ಇದ್ದೀ?
ನಿನಗೆ ತಿಳುವಳಿಕೆ ಇದ್ದರೆ ನನಗೆ ಹೇಳು.
5 ಭೂಮಿಯ ಅಳತೆಯನ್ನು ಗೊತ್ತುಮಾಡಿದವರು ಯಾರು? ನಿಶ್ಚಯವಾಗಿ ನಿನಗೆ ಗೊತ್ತಿರಬೇಕಲ್ಲಾ?
ಭೂಮಿಯ ಮೇಲೆ ನೂಲು ಹಿಡಿದವರು ಯಾರು?
6 ಯಾವುದರ ಮೇಲೆ ಭೂಮಿಯ ಅಸ್ತಿವಾರ ಸ್ಥಿರಪಡಿಸಲಾಗಿದೆ?
ಅದಕ್ಕೆ ಮೂಲೆಗಲ್ಲನ್ನು ಇಟ್ಟವರು ಯಾರು?
7 ಉದಯದ ನಕ್ಷತ್ರಗಳು ಕೂಡಿ ಹಾಡುತ್ತಿರುವಾಗ, ದೇವದೂತರೆಲ್ಲರೂ ಹರ್ಷಧ್ವನಿಮಾಡುತ್ತಿರುವಾಗ,
ಭೂಮಿಗೆ ಮೂಲೆಗಲ್ಲು ಹಾಕಿದವರಾರು?
8 "ಭೂಗರ್ಭವನ್ನು ನುಗ್ಗಿಕೊಂಡು ಬಂದ,
ಸಮುದ್ರವನ್ನು ದ್ವಾರಗಳಿಂದ ಮುಚ್ಚಿದವರು ಯಾರು?
9 ನಾನು ಸಮುದ್ರಕ್ಕೆ ಮೇಘವನ್ನು ವಸ್ತ್ರವನ್ನಾಗಿ ತೊಡಿಸಿ,
ಅದಕ್ಕೆ ಕಾರ್ಗತ್ತಲನ್ನು ಉಡಿಸಿದೆನು.
10 ನಾನು ಸಮುದ್ರಕ್ಕೆ ಮಿತಿಗಳನ್ನು ನಿಗದಿಪಡಿಸಿ,
ಅಗುಳಿಗಳನ್ನೂ, ಬಾಗಿಲುಗಳನ್ನೂ ಇಟ್ಟೆನು.
11 ‘ಇಲ್ಲಿಯ ತನಕ ಬರಬಹುದು, ಇದನ್ನು ಮೀರಿ ಬರಕೂಡದು;
ಇಲ್ಲಿಗೇ ನಿನ್ನ ತೆರೆಗಳ ಹೆಮ್ಮೆ ನಿಲ್ಲಲಿ,’ ಎಂದು ಆಜ್ಞಾಪಿಸಿದೆನು.