13 ನನ್ನ ಅಂತರಾತ್ಮವನ್ನು ಉಂಟು ಮಾಡಿದವರು ನೀವೇ;
ನನ್ನ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವರು ನೀವೇ.
14 ನೀವು ನನ್ನನ್ನು ವಿಚಿತ್ರವಾಗಿಯೂ ವಿಸ್ಮಯವಾಗಿಯೂ ಸೃಷ್ಟಿಸಿದ್ದರಿಂದ
ನಾನು ನಿಮ್ಮನ್ನು ಸ್ತುತಿಸುತ್ತೇನೆ;
ನಿಮ್ಮ ಕೃತ್ಯಗಳು ಆಶ್ಚರ್ಯಕರವಾಗಿವೆ ಎಂದು,
ನಾನು ಪೂರ್ಣವಾಗಿ ತಿಳಿದಿದ್ದೇನೆ.
15 ನೀವು ನನ್ನನ್ನು ಮರೆಯಲ್ಲಿ ರೂಪಿಸಿದಾಗಲೂ,
ಭೂಗರ್ಭದಲ್ಲಿ ನನ್ನನ್ನು ರಚಿಸಿದಾಗಲೂ
ನನ್ನ ಅಸ್ಥಿಪಂಜರವು ನಿಮಗೆ ಮರೆಯಾಗಿರಲಿಲ್ಲ.
16 ನಾನು ಇನ್ನೂ ಭ್ರೂಣವಾಗಿರುವಾಗಲೇ ನಿಮ್ಮ ಕಣ್ಣುಗಳು ನನ್ನನ್ನು ನೋಡಿದವು;
ನೀವು ನನಗೆ ಅನುಮತಿಸಿರುವ ಪ್ರಥಮ ದಿನದಿಂದ ಕೊನೆಯದಿನದವರೆಗೆ
ನನ್ನ ಎಲ್ಲಾ ದಿನಗಳೂ ನಿಮ್ಮ ಪುಸ್ತಕದಲ್ಲಿ ಬರೆಯಲಾಗಿವೆ.
17 ದೇವರೇ, ನಿಮ್ಮ ಆಲೋಚನೆಗಳು ನನಗೆ ಎಷ್ಟೋ ಅಮೂಲ್ಯವಾಗಿವೆ!
ಅವುಗಳ ಎಣಿಕೆ ನನಗೆ ಎಷ್ಟೋ ಅಸಂಖ್ಯವಾಗಿವೆ!
18 ನಾನು ಅವುಗಳನ್ನು ಎಣಿಸಿದರೆ,
ಅವು ಮರಳಿಗಿಂತಲೂ ಹೆಚ್ಚಾಗಿವೆ!
ನಾನು ಎಚ್ಚರವಾಗುವಾಗ, ನಿಶ್ಚಯವಾಗಿಯೂ ನಿಮ್ಮ ಸಂಗಡ ಇರುವೆನು.