1 ಆಕಾಶವು ದೇವರ ಮಹಿಮೆಯನ್ನು ಸಾರುತ್ತದೆ;
ಅಂತರಿಕ್ಷವು ಅವರ ಕೈಕೆಲಸವನ್ನು ಘೋಷಿಸುತ್ತದೆ.
2 ಹಗಲೆಲ್ಲಾ ಅವು ಮಾತನಾಡುತ್ತವೆ;
ರಾತ್ರಿಯೆಲ್ಲಾ ಅವು ಅರಿವನ್ನು ಪ್ರಕಟಿಸುತ್ತವೆ.
3 ಅವುಗಳಿಗೆ ಮಾತೂ ಇಲ್ಲ, ಪದವೂ ಇಲ್ಲ,
ಅವುಗಳ ಸ್ವರವು ಕೇಳುವುದೂ ಇಲ್ಲ.
4 ಅವುಗಳ ಧ್ವನಿ ಭೂಲೋಕವೆಲ್ಲಾ ಹರಡಿವೆ;
ಅವುಗಳ ಮಾತುಗಳೋ ಲೋಕದ ಕಟ್ಟಕಡೆಯವರೆಗೂ ಹೋಗುತ್ತವೆ;
ಆಕಾಶದಲ್ಲಿ ದೇವರು ಸೂರ್ಯನಿಗೆ ಗುಡಾರ ಹಾಕಿದ್ದಾರೆ.
5 ಸೂರ್ಯನು ಮದುಮಗನಂತೆ ತನ್ನ ಕೊಠಡಿಯಿಂದ ಹೊರಟುಬಂದು,
ಪಂದ್ಯಕ್ಕೆ ಹರ್ಷದಿಂದ ಓಡುವ ಪರಾಕ್ರಮಶಾಲಿಯಂತೆ ಇದ್ದಾನೆ.
6 ಆಕಾಶದ ಒಂದು ಕಡೆಯಿಂದ ಉದಯಿಸಿ
ಮತ್ತೊಂದು ಕಡೆಯವರೆಗೆ ಹೊರಟು ಪ್ರಯಾಣಿಸುತ್ತಾನೆ;
ಅದರ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.
7 ಯೆಹೋವ ದೇವರ ನಿಯಮವು ಸಂಪೂರ್ಣವಾಗಿದ್ದು,
ಪ್ರಾಣಕ್ಕೆ ಜೀವಕರವಾಗಿದೆ;
ಯೆಹೋವ ದೇವರ ಶಾಸನಗಳು ವಿಶ್ವಾಸಪಾತ್ರವಾಗಿದ್ದು,
ಮುಗ್ಧನನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ.
8 ಯೆಹೋವ ದೇವರ ಸೂತ್ರಗಳು ನೀತಿಯುಳ್ಳವುಗಳಾಗಿದ್ದು
ಅವು ಹೃದಯಕ್ಕೆ ಆನಂದಕರವಾಗಿವೆ;
ಯೆಹೋವ ದೇವರ ಆಜ್ಞೆಗಳು ಸ್ಪಷ್ಟವಾಗಿದ್ದು,
ಕಣ್ಣುಗಳಿಗೆ ಪ್ರಕಾಶಕರವಾಗಿವೆ.