Pular para o conteúdo
Publicidade

ಕೀರ್ತನೆಗಳು 30

ದೇವಾಲಯದ ಸಮರ್ಪಣೆಗಾಗಿ ದಾವೀದನು ಸಂಯೋಜಿಸಿದ ಹಾಡು. ದಾವೀದನ ಕೀರ್ತನೆ.

1 ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವೆನು;

ನೀವು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿದ್ದೀರಿ.

ನನ್ನನ್ನು ಮೇಲಕ್ಕೆ ಎತ್ತಿದ್ದೀರಿ.

2 ನನ್ನ ದೇವರಾದ ಯೆಹೋವ ದೇವರೇ, ಸಹಾಯಕ್ಕಾಗಿ ನಿಮಗೆ ಮೊರೆಯಿಡಲು,

ನನ್ನನ್ನು ಸ್ವಸ್ಥಮಾಡಿದ್ದೀರಿ.

3 ಯೆಹೋವ ದೇವರೇ, ನನ್ನ ಪ್ರಾಣವನ್ನು ಪಾತಾಳದೊಳಗಿಂದ ಎತ್ತಿದ್ದೀರಿ;

ನಾನು ಸಮಾಧಿ ಸೇರದ ಹಾಗೆ ನನ್ನನ್ನು ಬದುಕಿಸಿದ್ದೀರಿ.

4 ಯೆಹೋವ ದೇವರ ವಿಶ್ವಾಸಿಗಳೇ ಅವರನ್ನು ಕೊಂಡಾಡಿರಿ;

ಅವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.

5 ಅವರ ಕೋಪವು ಕ್ಷಣಮಾತ್ರವೇ;

ಆದರೆ ಅವರ ದಯೆಯು ಜೀವಮಾನವೆಲ್ಲಾ ಇರುತ್ತದೆ;

ರಾತ್ರಿಯಲ್ಲಿ ದುಃಖ ಬಂದಿದ್ದರೂ;

ಬೆಳಿಗ್ಗೆ ಆನಂದವು ಬರುವುದು.

6 ನಾನು ಸುರಕ್ಷಿತನಾಗಿದ್ದಾಗ,

"ನಾನೆಂದೂ ಕದಲುವುದಿಲ್ಲ," ಎಂದು ಹೇಳಿಕೊಂಡೆನು.

7 ಯೆಹೋವ ದೇವರೇ, ನಿಮ್ಮ ದಯೆಯಿಂದ

ನನ್ನ ರಾಜ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀರಿ

ಆದರೆ ನೀವು ನಿಮ್ಮ ಮುಖವನ್ನು ಮರೆಮಾಡಲು

ನಾನು ಕಳವಳಗೊಂಡೆನು.

8 ಯೆಹೋವ ದೇವರೇ, ನಾನು ನಿಮಗೆ ಮೊರೆಯಿಟ್ಟೆನು;

ಕರುಣೆಗಾಗಿ ಯೆಹೋವ ಕರ್ತ ಆಗಿರುವವರಿಗೆ ಬಿನ್ನವಿಸಿದೆನು.

9 ನಾನು ಸಮಾಧಿಯಲ್ಲಿ ಇಳಿದು ಹೋಗಿ ನಾಶವಾದರೆ,

ಅದರಿಂದ ನಿಮಗೆ ಆಗುವ ಲಾಭವೇನು?

ಧೂಳು ನಿಮ್ಮನ್ನು ಸ್ತುತಿಸುವುದೋ?

ಅದು ನಿಮ್ಮ ನಂಬಿಗಸ್ತಿಕೆಯನ್ನು ಪ್ರಕಟಿಸುವುದೋ?

10 ಯೆಹೋವ ದೇವರೇ, ಲಾಲಿಸು; ನನ್ನನ್ನು ಕರುಣಿಸಿರಿ;

ಯೆಹೋವ ದೇವರೇ, ನನಗೆ ಸಹಾಯಕರಾಗಿರಿ.

11 ನೀವು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರುಗಿಸಿದ್ದೀರಿ;

ನೀವು ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಹರ್ಷವಸ್ತ್ರವನ್ನು ನನಗೆ ಧರಿಸಿದ್ದೀರಿ.

12 ಆದ್ದರಿಂದ ನನ್ನ ಹೃದಯವು ಮೌನವಿರದೆ ನಿಮ್ಮನ್ನು ಯುಗಯುಗಕ್ಕೂ ಕೊಂಡಾಡುತ್ತಿರುವುದು.

ನನ್ನ ದೇವರಾದ ಯೆಹೋವ ದೇವರೇ, ನಾನು ನಿಮ್ಮನ್ನು ಸದಾಕಾಲವೂ ಸ್ತುತಿಸುವೆನು.

Estes versículos te tocaram? Ore agora!

+581 estão orando agora.

Junte-se à corrente de oração.